25.2 C
Bellary
Friday, June 21, 2024

Localpin

spot_img

ರಾಜ್ಯಮಟ್ಟದ ಯುವಜನೋತ್ಸವ ಕಾರ್ಯಕ್ರಮಕ್ಕೆ ಸಚಿವರಿಂದ ಚಾಲನೆ

ಬಳ್ಳಾರಿ: ಯುವಜನರ ಮತ್ತು ಕ್ರೀಡಾಪಟುಗಳ ಬೆಳವಣಿಗೆಗೆ ಎಲ್ಲಾ ರೀತಿಯ ಬೆಂಬಲ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಯುವಜನ ಸಬಲೀಕರಣ, ಕ್ರೀಡೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಹೇಳಿದರು. ಎಂದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ನಲ್ಲಚೆರುವು ಪ್ರದೇಶದ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನೇತೃತ್ವದ ಸರ್ಕಾರವು, ಯುವಜನರಿಗೆ ಮತ್ತು ಕ್ರೀಡಾಪಟುಗಳ ಪ್ರತಿಭೆಯನ್ನು ಗುರುತಿಸುವ ಕೆಲಸ ಮಾಡುತ್ತಿದೆ. ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಪ್ರತಿಯೊಂದು ಇಲಾಖೆಗಳಲ್ಲಿ ಶೇ.02 ರಷ್ಟು ಉದ್ಯೋಗ ಮೀಸಲಾತಿ ಕಲ್ಪಿಸಲು ನಿರ್ಧಾರ ಕೈಗೊಳ್ಳುತ್ತಿದೆ ಎಂದರು.
ಜಿಲ್ಲೆಯಲ್ಲಿ ಮಾದರಿ ಕ್ರೀಡಾ ವಸತಿ ನಿಲಯ ನಿರ್ಮಾಣ:
ರಾಜ್ಯದಲ್ಲಿಯೇ ಅತ್ಯಂತ ಮಾದರಿಯಾದ ಕ್ರೀಡಾ ವಸತಿ ನಿಲಯವನ್ನು ಬಳ್ಳಾರಿಯಲ್ಲಿ ನಿರ್ಮಿಸಲಾಗುವುದು. ಈ ಮೂಲಕ ರಾಜ್ಯದಲ್ಲಿ ಕ್ರೀಡೆಗಳಿಗೆ ಮತ್ತು ಕ್ರೀಡಾ ಪಟುಗಳಿಗೆ ಪ್ರೋತ್ಸಾಹ ತುಂಬುವ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ ಎಂದರು.
ಕಲಿಕೆ ಒಂದೇ ಮಾರ್ಗವಲ್ಲ, ಬದಲಾಗಿ ಅನೇಕ ರಂಗಗಳಲ್ಲಿ ಯುವಕರು ತಮ್ಮನ್ನು ತಾವು ತೊಡಗಿಸಿಕೊಂಡು ಮುನ್ನಡೆಯಬೇಕು. ಪ್ರತಿಯೊಬ್ಬ ಯುವಕ-ಯುವತಿಯರಲ್ಲಿ ವಿಭಿನ್ನ ಹಾಗೂ ವಿಶಿಷ್ಟವಾದ ಪ್ರತಿಭೆಯನ್ನು ಹೊಂದಿರುತ್ತಾರೆ. ಸಂಕಲ್ಪ ಇಟ್ಟುಕೊಂಡು ಗುರಿ ತಲುಪಿದರೆ, ಯಶಸ್ಸು ನಿಮ್ಮದಾಗುತ್ತದೆ ಎಂದು ಕಿವಿಮಾತು ಹೇಳಿದರು.
ಕುಟುಂಬ ಹಿನ್ನಲೆಯಲ್ಲಿ ಅನೇಕ ಸಮಸ್ಯೆಗಳಿದ್ದರೂ, ಯುವಜನ ತಮ್ಮ ಗುರಿಯನ್ನು ತಲುಪಲು ಛಲ ಬಿಡದೆ, ತಮ್ಮ ಕನಸುಗಳನ್ನು ಕಟ್ಟಿಕೊಳ್ಳುವ ಕೆಲಸ ಮಾಡಬೇಕು. ಯುವಕರಲ್ಲಿ ಮುಖ್ಯವಾಗಿ ಒಳ್ಳೆಯ ಗುಣ ಮತ್ತು ಸಂಸ್ಕೃತಿ ಅಳವಡಿಸಿಕೊಂಡಾಗ ಮಾತ್ರ ಎಲ್ಲವನ್ನೂ ಪಡೆಯಲು ಸಾಧ್ಯ ಎಂದು ವಿಶ್ವಾಸ ಮೂಡಿಸಿದರು.

ಫೆಬ್ರವರಿಯಲ್ಲಿ ಬಳ್ಳಾರಿ ಉತ್ಸವ:
ಕಡಿಮೆ ಕಾಲಾವಕಾಶದಲ್ಲಿ ಆಯೋಜಿಸಿರುವ ಯುವಜನೋತ್ಸವವನ್ನು ಇನ್ನೂ ಅತ್ಯಂತ ಅದ್ದೂರಿಯಾಗಿ ಆಯೋಜಿಸಲು ಫೆಬ್ರವರಿ ತಿಂಗಳಲ್ಲಿ ಬಳ್ಳಾರಿ ಉತ್ಸವವನ್ನು ಆಯೋಜಿಸಲಾಗುವುದು. ಪ್ರತಿಯೊಬ್ಬರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.

ಯುವಜನೋತ್ಸವ ಕಾರ್ಯಕ್ರಮ ರಾಜ್ಯದ ಕಲೆ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ರಾಷ್ಟ್ರ ಮಟ್ಟದಲ್ಲಿ ಪಸರಿಸಲು ಯುವಜನರಿಗೆ ಉತ್ತಮ ವೇದಿಕೆಯಾಗಿದೆ. ಇದನ್ನು ಯುವಜನತೆ ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ರಾಜ್ಯದ ಮತ್ತು ಕನ್ನಡ ಭಾಷೆಯ ಕಂಪನ್ನು ರಾಷ್ಟ್ರ ಮಟ್ಟದಲ್ಲಿ ಎತ್ತಿಹಿಡಿಯಲಿ ಎಂದು ಅವರು ಆಶಿಸಿದರು.

ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಮಾತನಾಡಿ, ನಮ್ಮ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರ ಪಟ್ಟಿನಿಂದ ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮವು ಮೊದಲ ಬಾರಿಗೆ ಜಿಲ್ಲೆಯಲ್ಲಿ ಆಯೋಜಿಸಲಾಗುತ್ತಿದೆ, ಮುಂದಿನ ವರ್ಷ ಅತ್ಯಂತ ಅದ್ದೂರಿಯಾಗಿ ಆಯೋಜಿಸಲು ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು.

ನಮ್ಮ ಭಾಗದ ಯುವಕರು ಕ್ರೀಡಾ ವಲಯದಲ್ಲಿ ಭಾಗವಹಿಸಿ, ಕ್ರೀಡಾ ಮೀಸಲಾತಿಗಳಲ್ಲಿ ಉದ್ಯೋಗ ಸಿಗುತ್ತಿಲ್ಲ, ಕ್ರೀಡಾ ಸಚಿವರಾದ ನಾಗೇಂದ್ರ ಅವರು ಕ್ರೀಡಾ ಮೀಸಲಾತಿ ಅಡಿ ಉದ್ಯೋಗ ವಲಯದಲ್ಲಿ ಕೆಲಸ ಸಿಗುವಂತೆ ಕ್ರಮವಹಿಸಬೇಕು. ಬಳ್ಳಾರಿ ಜಿಲ್ಲೆಯನ್ನು ಇಡೀ ರಾಜ್ಯದಲ್ಲಿಯೇ ಸ್ಪೋರ್ಟ್ಸ್ ಹಬ್ ಆಗಿ ನಿರ್ಮಿಸಬೇಕು ಎಂದು ಮನವಿ ಮಾಡಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾದ ಎನ್.ಶಶಿಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಯುವ ಜನೋತ್ಸವ ಕಾರ್ಯಕ್ರಮವು ರಾಷ್ಟ್ರದ ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವಂತಹದ್ದಾಗಿದೆ. ವೈವಿಧ್ಯಮಯ ಕಲೆ, ಸಂಸ್ಕೃತಿ, ಸಾಹಿತ್ಯ ಮತ್ತು ಭಾಷೆಗಳಲ್ಲಿನ ಶ್ರೀಮಂತಿಕೆಯನ್ನು ಯುವಜನರಿಗೆ ಪರಿಚಯಿಸಲು ಒಂದು ಉತ್ತಮ ಅವಕಾಶವಾಗಿದೆ ಎಂದರು.

ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಮಾತನಾಡಿ, ಈ ವರ್ಷದ ರಾಜ್ಯ ಮಟ್ಟದ ಯುವಜನೋತ್ಸವ ನಮ್ಮ ಜಿಲ್ಲೆಯಲ್ಲಿ ಆಯೋಜಿಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದರಲ್ಲದೇ, ಇದೇ ಸಂದರ್ಭದಲ್ಲಿ ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರಿಗೆ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಿಗೆ ಅಭಿನಂದನೆ ಸಲ್ಲಿಸಿದರು.

ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್.ಎನ್ ಅವರು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಉಪಮಹಾಪೌರರಾದ ಬಿ.ಜಾನಕಿ, ಬಳ್ಳಾರಿ ವಲಯ ಪೊಲೀಸ್ ಮಹಾನಿರೀಕ್ಷಕರಾದ ಬಿ.ಎಸ್.ಲೋಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಸಹಾಯಕ ಆಯುಕ್ತ ಹೇಮಂತ್.ಎನ್., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಗ್ರೇಸಿ ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು, ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ತಾಷೆ ರಾಮ್ ಡೋಲ್, ಡೊಳ್ಳುಕುಣಿತ, ಚಂಡೆ ವಾದ್ಯ ಕಲಾತಂಡಗಳ ಪ್ರದರ್ಶನ ಮೆರಗು ನೀಡಿದವು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles