ಬೆಳಗಾಯಿತು ವಾರ್ತೆ |www.belagayithu.in
ಬಳ್ಳಾರಿ: ಹಣಕಾಸು ಶಿಕ್ಷಣ ಮತ್ತು ಹೂಡಿಕೆ ಎಂಬ ವಿಷಯವನ್ನು ಕೌಶಲ್ಯವರ್ಧನೆ ವಿಷಯವನ್ನಾಗಿ ಪಠ್ಯಕ್ರಮದಲ್ಲಿ ಅಳವಡಿಸಿರುವುದರಿಂದ ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಕ್ಷಿಪ್ರ ಕಲಿಕೆಗೆ ಹಾಗೂ ಉದ್ಯೋಗಶೀಲರನ್ನಾಗಿಸಲು ಸಹಕಾರಿಯಾಗುತ್ತದೆ ವಿಶ್ವ ವಿದ್ಯಾಲಯದ ಕುಲಪತಿಗಳಾದ ಪ್ರೊ. ಕೆ. ಎಂ. ಮೇತ್ರಿ ಎಂದು ಹೇಳಿದರು.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಗುರುವಾರ ವಾಣಿಜ್ಯ ಅಧ್ಯಯನ ವಿಭಾಗದ ವತಿಯಿಂದ ಆಯೋಜಿಸಲಾದ ‘ವ್ಯಾಪಾರದಲ್ಲಿ ಸ್ಥಿತಿಸ್ಥಾಪಕತ್ವದ ನವ ಪ್ರವೃತ್ತಿ’ ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಜ್ಯೋತಿ ಬೆಳಗಿಸುವ ಮುಖಾಂತರ ಉದ್ಘಾಟಿಸಿ ಅವರು ಮಾತನಾಡಿದರು.
ವಾಣಿಜ್ಯ ಅಥವಾ ನಿರ್ವಹಣಾಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗೆ ಸೀಮಿತವಾಗದೆ ಇನ್ನಿತರ ವಿಭಾಗಗಳ ವಿದ್ಯಾರ್ಥಿಗಳಿಗೆ ಬಹುಶಿಸ್ತೀಯ ಅಧ್ಯಯನ ವಿಷಯವಾಗಿ ಪರಿಚಯಿಸುವುದು ಅಗತ್ಯ ಎಂದು ಹೇಳಿದರು. ಪ್ರತಿಯೊಂದು ವಿಷಯದ ಅಭಿವೃದ್ಧಿಗೆ ತಳಮಟ್ಟದ ಅಧ್ಯಯನ ಬಹು ಮುಖ್ಯವಾಗಿದೆ ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಯ ಕುಲಸಚಿವರಾದ ರುದ್ರೇಶ್ ಎಸ್ ಎನ್, ಕುಲಸಚಿವರು (ಮೌಲ್ಯಮಾಪನ) ಪ್ರೊ. ರಮೇಶ್ ಓಲೇಕಾರ್, ವಿತ್ತಾಧಿಕಾರಿ ಪ್ರೊ. ಸದ್ಯೋಜಾತಪ್ಪ, ನಿರ್ವಹಣಾಶಾಸ್ತ್ರ ಡೀನರಾದ ಪ್ರೊ. ಜಿ.ಪಿ. ದಿನೇಶ್ ಸಮ್ಮೇಳನದ ಸಂಚಾಲಕರಾದ ಪ್ರೊ. ಜೀಲನ್ ಬಾಷಾ ಹಾಗೂ ಪ್ರೊ. ಭೀಮನಗೌಡ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.