“ಧೈರ್ಯ ಮತ್ತು ಶಾಂತ ಮನಸ್ಸಿನಿಂದ ಪರೀಕ್ಷೆ ಬರೆಯಿರಿ” ವಿದ್ಯಾರ್ಥಿಗಳಿಗೆ ಶಾಸಕ ಪತ್ರ


ಬೆಳಗಾಯಿತು ವಾರ್ತೆ
ಬಳ್ಳಾರಿ:
ಬಳ್ಳಾರಿ ನಗರ ಕ್ಷೇತ್ರದ ಶಾಸಕ ನಾರಾ ಭರತ್ ರೆಡ್ಡಿಯವರು ಪರೀಕ್ಷೆಗೆ ಸಜ್ಜಾಗಿರುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪತ್ರ ಬರೆದಿದ್ದಾರೆ.
ನಗರ ಕ್ಷೇತ್ರದ 45ಕ್ಕೂ ಹೆಚ್ಚು ಶಾಲೆಗಳ ಅಂದಾಜು ಮೂರು ಸಾವಿರ ವಿದ್ಯಾರ್ಥಿಗಳಿಗೆ ಪತ್ರ ಬರೆದಿರುವ ಅವರು ಧೈರ್ಯ ಮತ್ತು ಶಾಂತ ಮನಸ್ಸಿನಿಂದ ಪರೀಕ್ಷೆ ಬರೆಯಿರಿ ಎಂದು ಸಲಹೆ ನೀಡಿದ್ದಾರೆ.
ಅವರು ಪ್ರತಿ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಕಳಿಸಿರುವ ಪತ್ರದ ಒಕ್ಕಣೆ ಈ ರೀತಿ ಇದೆ.
ಪ್ರೀತಿಯ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳೇ ಮತ್ತು ಗೌರವಾನ್ವಿತ ಪೋಷಕರೇ,
ಬಳ್ಳಾರಿ ಜಿಲ್ಲೆಯ ಭವಿಷ್ಯವಾಗಿರುವ ನನ್ನ ಪ್ರೀತಿಯ ವಿದ್ಯಾರ್ಥಿಗಳೇ, ನಿಮ್ಮ ಶಿಕ್ಷಣ ಯಾತ್ರೆಯ ಮಹತ್ವದ ಘಟ್ಟವೊಂದು ನಿಮ್ಮ ಮುಂದೆ ಬಂದುನಿಂತಿದೆ. ಇದುವರೆಗಿನ ಕಲಿಕೆಯ ಶ್ರಮವು ಸಾರ್ಥಕವಾಗುವುದು ಪರೀಕ್ಷೆಯ ಫಲಿತಾಂಶದಲ್ಲಿ. ಮಾರ್ಚ್ 18 ರಿಂದ ಎಸ್ಎಸ್ಎಲ್ಸಿ ಪರೀಕ್ಷೆಗಳು ಆರಂಭವಾಗುತ್ತಿರುವ ಈ ಸಂದರ್ಭದಲ್ಲಿ, ನಿಮ್ಮೆಲ್ಲರಿಗೂ ನನ್ನ ಹೃದಯಪೂರ್ವಕ ಶುಭಾಶಯಗಳು.

ಸ್ವಾಮಿ ವಿವೇಕಾನಂದರು ಹೇಳುವಂತೆ ಶಿಕ್ಷಣವು ವ್ಯಕ್ತಿತ್ವ ನಿರ್ಮಾಣಕ್ಕೆ, ಜೀವನವನ್ನು ರೂಪಿಸಲು ಹಾಗೂ ದೇಶದ ಭವಿಷ್ಯವನ್ನು ಕಟ್ಟಲು ಸಹಾಯಕವಾಗಬೇಕು. ಈ ಮಾತನ್ನು ಮನದಲ್ಲಿ ಇಟ್ಟುಕೊಂಡು, ಭಯವಿಲ್ಲದೆ, ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕೆಂದು ನಾನು ನಿಮ್ಮನ್ನು ಪ್ರೋತ್ಸಾಹಿಸುತ್ತೇನೆ. ಪ್ರಿಯ ವಿದ್ಯಾರ್ಥಿಗಳೇ, ಪರೀಕ್ಷೆ ನಿಮ್ಮ ಸಾಮರ್ಥ್ಯವನ್ನು ಅಳೆಯುವ ಒಂದು ಹಂತ ಮಾತ್ರ. ಯಶಸ್ಸು ಅಂತಿಮವಲ್ಲ, ವಿಫಲತೆ ಅಂತ್ಯವಲ್ಲ – ಮುಂದುವರಿಯುವ ಧೈರ್ಯವೇ ನಿಜವಾದ ವಿಜಯ. ನಿಮ್ಮ ಪರಿಶ್ರಮವೇ ನಿಮ್ಮ ಶಕ್ತಿ. ಶಾಂತ ಮನಸ್ಸಿನಿಂದ, ನಿಯಮಿತ ಅಭ್ಯಾಸದೊಂದಿಗೆ ಉತ್ತರಗಳನ್ನು ಬರೆಯಿರಿ. ನಿಮ್ಮೊಳಗಿನ ಸಾಮರ್ಥ್ಯದ ಮೇಲೆ ನಂಬಿಕೆ ಇಡಿ.

ಗೌರವಾನ್ವಿತ ಪೋಷಕರೇ, ಈ ಸಮಯದಲ್ಲಿ ನಿಮ್ಮ ಪಾತ್ರ ಅತ್ಯಂತ ಮಹತ್ವದ್ದು. ಮಕ್ಕಳಿಗೆ ಒತ್ತಡವಲ್ಲ, ವಿಶ್ವಾಸ ಮತ್ತು ಪ್ರೋತ್ಸಾಹ ಕೊಟ್ಟರೆ ಅವರು ಇತಿಹಾಸವಾಗಿ ಉಳಿಯುತ್ತಾರೆ. ಮಕ್ಕಳನ್ನು ಅಂಕಗಳಿಗಾಗಿ ಅಲ್ಲ, ಅವರ ಪ್ರಯತ್ನಕ್ಕಾಗಿ ಪ್ರಶಂಸಿಸಿ. ನಿಮ್ಮ ಪ್ರೀತಿ ಮತ್ತು ಬೆಂಬಲವೇ ಅವರ ದೊಡ್ಡ ಶಕ್ತಿ.
ನಿಮ್ಮ ಸಾಧನೆಯ ಮೂಲಕ ಜಿಲ್ಲೆಯ ಗೌರವವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕೆಂಬುದು ನನ್ನೆದೆಯ ಆಶಯ. “ಒಂದು ಪೀಳಿಗೆಗೆ ಶಿಕ್ಷಣ ಕೊಟ್ಟರೆ, ಅನೇಕ ಪೀಳಿಗೆಗಳು ಬೆಳಗುತ್ತವೆ.” ನಿಮ್ಮ ಸಾಧನೆ ನಿಮ್ಮ ಕುಟುಂಬಕ್ಕೆ ಮಾತ್ರವಲ್ಲ, ಸಮಾಜಕ್ಕೂ ದಾರಿ ತೋರಲಿ. ಪರೀಕ್ಷೆಗಳನ್ನು ಆತ್ಮಸ್ಥೈರ್ಯದಿಂದ ಎದುರಿಸಿ, ಯಶಸ್ಸು ನಿಮ್ಮದಾಗಲೆಂದು ಹಾರೈಸುತ್ತೇನೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles