ಬೆಳಗಾಯಿತು ವಾರ್ತೆ |www.belagayithu.in
ಬಳ್ಳಾರಿ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ದೇವಸ್ಥಾನಕ್ಕೆ ಭಕ್ತರು ನೀಡಿದ ದೇಣಿಗೆ ಹಣದ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸಮಗ್ರ ಹಾಗೂ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಅಖಂಡ ಬಳ್ಳಾರಿ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಆಗ್ರಹಿಸಿದರು.
ನಗರದ ಅನಂತಪುರ ರಸ್ತೆಯ ಅತಿಥಿ ಗೃಹದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶ ಪೊಲೀಸರು ವಿಶೇಷ ತನಿಖಾ ತಂಡದ (ಎಸ್ಐಟಿ) ಪ್ರಾಥಮಿಕ ವರದಿಯ ಆಧಾರದ ಮೇಲೆ ಪ್ರಕರಣ ದಾಖಲಿಸಿ ಎಂಟು ಮಂದಿಯನ್ನು ಬಂಧಿಸಿರುವುದು ಪ್ರಕರಣದ ಗಂಭೀರತೆಯನ್ನು ತೋರಿಸುತ್ತದೆ ಎಂದು ಹೇಳಿದರು.
ಬಂಧಿತರಲ್ಲಿ ದೇವಸ್ಥಾನದ ದೇಣಿಗೆ ಎಣಿಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಸಿಬ್ಬಂದಿ, ದೇಣಿಗೆ ಪೆಟ್ಟಿಗೆಯ ಕೀಲಿಯ ಜವಾಬ್ದಾರಿ ಹೊಂದಿದ್ದವರು ಹಾಗೂ ಹಣದ ನಿರ್ವಹಣೆಗೆ ಸಂಬಂಧಿಸಿದ ಅಧಿಕಾರಿಗಳು ಸೇರಿದ್ದಾರೆ. ಕೆಲವರ ಬ್ಯಾಂಕ್ ಖಾತೆಗಳು ಹಾಗೂ ಮನೆಗಳಲ್ಲಿ ಅನುಮಾನಾಸ್ಪದ ಹಣ ಪತ್ತೆಯಾಗಿರುವ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ ಎಂದು ತಿಳಿಸಿದರು.
2025ರ ಏಪ್ರಿಲ್ನಿಂದ 2026ರ ಫೆಬ್ರವರಿವರೆಗೆ ದೇವಸ್ಥಾನಕ್ಕೆ ಬಂದ ದೇಣಿಗೆಯಲ್ಲಿ ಸುಮಾರು ₹7 ರಿಂದ ₹7.5 ಕೋಟಿ ಮೊತ್ತದ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಕಳವು, ನಂಬಿಕೆ ದ್ರೋಹ, ವಂಚನೆ ಹಾಗೂ ಕ್ರಿಮಿನಲ್ ಸಂಚು ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.
“ಇದು ಕೇವಲ ಹಣದ ಹಗರಣವಲ್ಲ; ಕೋಟ್ಯಂತರ ಭಕ್ತರ ನಂಬಿಕೆಗೆ ಮಾಡಿದ ದ್ರೋಹ. ಆದ್ದರಿಂದ ಈ ಪ್ರಕರಣವನ್ನು ಸಾಮಾನ್ಯ ತನಿಖೆಗೆ ಸೀಮಿತಗೊಳಿಸದೆ, ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ತನಿಖೆ ನಡೆಸಬೇಕು” ಎಂದು ಒತ್ತಾಯಿಸಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಪ್ರಕರಣದ ಕುರಿತು ಮೌನ ವಹಿಸಿರುವುದನ್ನು ಪ್ರಶ್ನಿಸಿದ ಉಗ್ರಪ್ಪ, ದೇಶದ ಜನರ ಅನುಮಾನಗಳಿಗೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ರಾಮಮಂದಿರ ದೇಶದ ಕೋಟ್ಯಂತರ ಹಿಂದೂಗಳ ಭಕ್ತಿಯ ಸಂಕೇತವಾಗಿದ್ದು, ಅದರ ಹೆಸರಿನಲ್ಲಿ ಯಾವುದೇ ಅಕ್ರಮ ನಡೆದಿದ್ದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ರಾಜಕೀಯ ಪ್ರಭಾವವಿಲ್ಲದೆ ತನಿಖೆ ನಡೆಸಿ ಸತ್ಯಾಂಶವನ್ನು ದೇಶದ ಜನರ ಮುಂದೆ ತರಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಬಳ್ಳಾರಿ ಮಹಾನಗರ ಪಾಲಿಕೆಯ ಮಹಾಪೌರ ಪಿ. ಗಾದೆಪ್ಪ, ಎಲ್. ಮಾರಣ್ಣ, ವೆಂಕಟೇಶ್ ಹೆಗ್ಡೆ, ಜೋಳದ ರಾಶಿ ತಿಮ್ಮಪ್ಪ, ವಿಷ್ಣುವರ್ಧನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.





