ಬೆಳಗಾಯಿತು ವಾರ್ತೆ | www.belagayithu.in
ನವದೆಹಲಿ: ಏಪ್ರಿಲ್ ಮತ್ತು ಜುಲೈ ನಡುವೆ ರಾಜ್ಯಸಭೆಯಿಂದ ನಿವೃತ್ತರಾಗುತ್ತಿರುವ 59 ಸದಸ್ಯರಿಗೆ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ನೆನಪಿನ ಸ್ಮರಣಿಕೆಗಳನ್ನು ನೀಡಿ ಗೌರವದಿಂದ ಬೀಳ್ಕೊಟ್ಟರು.
ಮೇಲ್ಮನೆಯಲ್ಲಿ ನಿವೃತ್ತರಾಗುತ್ತಿರುವ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಸಂಸತ್ತನ್ನು “ಮುಕ್ತ ವಿಶ್ವವಿದ್ಯಾಲಯ” ಎಂದು ಕರೆದರು ಮತ್ತು ಹೊರಹೋಗುವ ಸಂಸದರು, ತಮ್ಮ ಕ್ಷೇತ್ರಗಳಲ್ಲಿ ಇಲ್ಲಿ ಪಡೆದ ಅನುಭವವನ್ನು ಜನರಿಗೆ ತಲುಪಿಸಬೇಕು ಎಂದರು.
ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ ದೇಶದ ಹಿತದೃಷ್ಟಿಯಿಂದ ಸದಸ್ಯರು ಒಟ್ಟಾಗಿ ಕೆಲಸ ಮಾಡಿದ್ದನ್ನು ಪ್ರಧಾನಿ ನೆನೆದರು. ಇನ್ನು ಈ ಸಭೆಯಲ್ಲಿ ನಿವೃತ್ತರಾಗುತ್ತಿರುವ ಸದಸ್ಯರಲ್ಲಿ ವಿವಿಧ ಪಕ್ಷಗಳ ಪ್ರಮುಖ ನಾಯಕರು ಸೇರಿದ್ದಾರೆ. ನಿವೃತ್ತ ಸದಸ್ಯರಿಗೆ ನೆನಪಿನ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.
ನಿವೃತ್ತರಾಗುತ್ತಿರುವ ಸದಸ್ಯರ ಸೇವೆಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಸದನಕ್ಕೆ ಅವರು ನೀಡಿದ ಕೊಡುಗೆಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಿರುತ್ತವೆ ಎಂದು ತಿಳಿಸಿದರು.
“ಜ್ಞಾನಕ್ಕಿಂತ ಅನುಭವಕ್ಕೆ ಶಕ್ತಿ ಹೆಚ್ಚು. ಶೈಕ್ಷಣಿಕ ಜ್ಞಾನವು ಸೀಮಿತವಾಗಿರಬಹುದು, ಆದರೆ ಸದಸ್ಯರು ಇಲ್ಲಿ ಕಳೆದ ಸಮಯ ಮತ್ತು ಪಡೆದ ಅನುಭವವು ದೇಶದ ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ” ಎಂದು ಪ್ರಧಾನಿ ಹೇಳಿದರು.





