ಬೆಳಗಾಯಿತು ವಾರ್ತೆ| www.belagayithu.in
ವಿಜಯನಗರ: ತುಂಗಭದ್ರಾ ಅಣೆಕಟ್ಟಿನ 19ನೇ ಕ್ರೆಸ್ಟ್ ಗೇಟ್ 2024 ಆಗಸ್ಟ್ 10 ರಂದು ರಾತ್ರಿ ಅನಾಹುತದ ನಂತರ ತಾಂತ್ರಿಕ ತಂಡ ಕೈಗೊಳ್ಳಲಾದ ತುರ್ತು ದುರಸ್ತಿ ಕಾರ್ಯಗಳು ಈಗ ಅಂತಿಮ ಹಂತಕ್ಕೆ ತಲುಪಿವೆ. ಸೋಮವಾರ ಅಣೆಕಟ್ಟಿನ ಗೇಟ್ ಅಳವಡಿಕೆ ಕಾರ್ಯವನ್ನು ಖುದ್ದಾಗಿ ಪರಿಶೀಲಿಸಿದ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು, ಮೇ 15ರೊಳಗೆ ಸಂಪೂರ್ಣ ಕಾಮಗಾರಿ ಮುಗಿಸಿ ಲೋಕಾರ್ಪಣೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದರು.
ತುಂಗಭದ್ರಾ ಜಲಾಶಯ ಕ್ರಸ್ಟ್ ಗೇಟ್ ಕಾರ್ಯ ಪರಿಶೀಲನೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮಾಹಿತಿ ನೀಡಿದರು.
ಅಣೆಕಟ್ಟಿನ ಒಟ್ಟು 33 ಗೇಟ್‌ಗಳ ಪೈಕಿ 22 ಗೇಟ್‌ಗಳಿಗೆ ಸ್ಲೈಸ್ ಪ್ಲೇಟ್‌ಗಳನ್ನು ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ. ತಜ್ಞರ ವರದಿಯಂತೆ ಹಳೆಯ ಚೈನ್‌ಗಳು ಸದೃಢವಾಗಿದ್ದರೂ, ಮುನ್ನೆಚ್ಚರಿಕಾ ಕ್ರಮವಾಗಿ ಹೊಸ ಚೈನ್‌ಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಮೊದಲ ಸೆಟ್ ಹೊಸ ಚೈನ್‌ಗಳು ಮೇ 7 ರಂದು ಆಗಮಿಸಲಿದ್ದು, ಮೇ ಅಂತ್ಯದೊಳಗೆ ಚೈನ್ ಅಳವಡಿಕೆ ಕಾರ್ಯ ಸಂಪೂರ್ಣ ಪ್ರಕ್ರಿಯೆ ಮುಗಿಯಲಿದೆ. ಮುಂಬರುವ ಮಳೆಗಾಲವನ್ನು ಗಮನದಲ್ಲಿಟ್ಟುಕೊಂಡು ಮೇ 15 ರಂದು ಯೋಜನೆಯನ್ನು ಅಧಿಕೃತವಾಗಿ ಉದ್ಘಾಟಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ದಾಖಲೆ ಸಮಯದಲ್ಲಿ 33 ಗೇಟ್‌ಗಳನ್ನು ದುರಸ್ತಿಗೊಳಿಸಿದ್ದು ಇಡೀ ದೇಶಕ್ಕೆ ಒಂದು ದೊಡ್ಡ ಸವಾಲು ಮತ್ತು ಮಾದರಿಯಾಗಿದೆ. ಕೇವಲ ಗೇಟ್‌ಗಳ ದುರಸ್ಥಿಗೆ ಸುಮಾರು 54 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಇದಲ್ಲದೆ, ಕಾಲುವೆಗಳ ದುರಸ್ತಿ ಮತ್ತು ಇತರೆ ಕೆಳಹಂತದ ಕಾಮಗಾರಿಗಳಿಗೆ ಒಟ್ಟು 315 ಕೋಟಿ ರೂಪಾಯಿ ವ್ಯಯಿಸಲಾಗಿದೆ. ತಜ್ಞರ ವರದಿಯಂತೆ ಈ ದುರಸ್ತಿ ಕಾರ್ಯದಿಂದಾಗಿ ಅಣೆಕಟ್ಟಿನ ಆಯಸ್ಸು ಮುಂದಿನ 50 ವರ್ಷಗಳವರೆಗೆ ವೃದ್ಧಿಸಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ, ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾದ ಈಶ್ವರ ಬಿ. ಖಂಡ್ರೆ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರಾದ ಕೆ.ಎಚ್. ಮುನಿಯಪ್ಪ, ಕೊಪ್ಪಳ ಸಂಸದರಾದ ಕೆ.ರಾಜಶೇಖರ ಬಸವರಾಜ ಹಿಟ್ನಾಳ, ಬಳ್ಳಾರಿ ಸಂಸದರಾದ ಇ. ತುಕಾರಾಂ, ಶಾಸಕರುಗಳಾದ ಡಾ.ಎನ್.ಟಿ.ಶ್ರೀನಿವಾಸ, ಎಚ್.ಆರ್. ಗವಿಯಪ್ಪ, ಮಾಜಿ ಸಚಿವರಾದ ಅಮರೇಗೌಡ ಪಾಟೀಲ ಬಯ್ಯಾಪುರ, ಕೊಪ್ಪಳ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ, ವಿಜಯನಗರ ಜಿಲ್ಲಾಧಿಕಾರಿಗಳಾದ ಕವಿತಾ ಮನ್ನಿಕೇರಿ, ಜಿ.ಪಂ.ಸಿಇಓ ನೋಂಗ್ಜಾಯ್ ಮೋಹಮ್ಮದ್ ಅಲಿ ಅಕ್ರಮ್ ಷಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ಸೇರಿದಂತೆ ಇತರೆ ಜನಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.





