ಬಳ್ಳಾರಿ–ಗುಂತಕಲ್ ರೈಲು ಮಾರ್ಗಕ್ಕೆ 3ನೇ, 4ನೇ ಹಳಿ: 1,264 ಕೋಟಿ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ


46 ಕಿ.ಮೀ. ಹೆಚ್ಚುವರಿ ರೈಲು ಮಾರ್ಗ ನಿರ್ಮಾಣ; 99 ಗ್ರಾಮಗಳಿಗೆ ಸಂಪರ್ಕ, 7 ಲಕ್ಷ ಜನರಿಗೆ ಪ್ರಯೋಜನ – ಸರಕು ಸಾಗಣೆ, ಪ್ರವಾಸೋದ್ಯಮ ಮತ್ತು ಉದ್ಯೋಗ ವೃದ್ಧಿಗೆ ಹೊಸ ಉತ್ತೇಜನ
ನವದೆಹಲಿ: ಕರ್ನಾಟಕ ಮತ್ತು ಆಂಧ್ರ ಪ್ರದೇಶವನ್ನು ಸಂಪರ್ಕಿಸುವ ಪ್ರಮುಖ ಬಳ್ಳಾರಿ–ಗುಂತಕಲ್ ರೈಲು ಮಾರ್ಗದಲ್ಲಿ 3ನೇ ಹಾಗೂ 4ನೇ ರೈಲು ಹಳಿ ನಿರ್ಮಾಣಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (CCEA) ಸಭೆಯಲ್ಲಿ 1,264 ಕೋಟಿ ವೆಚ್ಚದ ಈ ಮಹತ್ವದ ಯೋಜನೆಗೆ ಹಸಿರು ನಿಶಾನೆ ತೋರಿಸಲಾಗಿದ್ದು, 2028-29ರೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ಈ ಯೋಜನೆಯಡಿ ಸುಮಾರು 46 ಕಿಲೋಮೀಟರ್ ಹೆಚ್ಚುವರಿ ರೈಲು ಮಾರ್ಗ ನಿರ್ಮಾಣವಾಗಲಿದ್ದು, ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಮೂರು ಜಿಲ್ಲೆಗಳ ರೈಲು ಸಂಪರ್ಕ ಮತ್ತಷ್ಟು ಬಲಗೊಳ್ಳಲಿದೆ. ರೈಲು ಸಂಚಾರ ಸಾಮರ್ಥ್ಯ ಹೆಚ್ಚುವುದರಿಂದ ಪ್ರಯಾಣಿಕರ ಸಂಚಾರ ಸುಗಮವಾಗುವುದರ ಜೊತೆಗೆ ಸರಕು ಸಾಗಣೆಗೂ ಹೆಚ್ಚಿನ ಅನುಕೂಲವಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, ಬಳ್ಳಾರಿ–ಗುಂತಕಲ್ ವಿಭಾಗದಲ್ಲಿ 3ನೇ ಹಾಗೂ 4ನೇ ರೈಲು ಹಳಿ ನಿರ್ಮಾಣಕ್ಕೆ ಸಚಿವ ಸಂಪುಟದ ಅನುಮೋದನೆ ದೊರೆತಿರುವುದು ಕರ್ನಾಟಕ ಹಾಗೂ ಆಂಧ್ರ ಪ್ರದೇಶದ ಸಂಪರ್ಕ ಮತ್ತು ಲಾಜಿಸ್ಟಿಕ್ಸ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಿದೆ ಎಂದು ತಿಳಿಸಿದ್ದಾರೆ. ರೈಲು ದಟ್ಟಣೆ ಕಡಿಮೆಯಾಗುವುದರೊಂದಿಗೆ ಪ್ರಮುಖ ಸರಕುಗಳ ಸಾಗಣೆ ಸುಲಭವಾಗಲಿದ್ದು, ಸಾಂಸ್ಕೃತಿಕ ಮತ್ತು ಪ್ರವಾಸಿ ತಾಣಗಳಿಗೆ ಉತ್ತಮ ಸಂಪರ್ಕ ಕಲ್ಪಿಸಿ ಹೊಸ ಆರ್ಥಿಕ ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ಅವರು ಹೇಳಿದ್ದಾರೆ.
ಯೋಜನೆಯಿಂದ ಸುಮಾರು 99 ಗ್ರಾಮಗಳಿಗೆ ಉತ್ತಮ ರೈಲು ಸಂಪರ್ಕ ದೊರೆಯಲಿದ್ದು, ಸುಮಾರು 7 ಲಕ್ಷ ಜನರಿಗೆ ನೇರ ಪ್ರಯೋಜನವಾಗಲಿದೆ. ಬಳ್ಳಾರಿ ಕೋಟೆ, ಶ್ರೀ ಕುಮಾರಸ್ವಾಮಿ ದೇವಸ್ಥಾನ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಿಗೆ ಸಂಪರ್ಕ ಸುಧಾರಣೆಯಾಗಲಿದೆ. ಕಬ್ಬಿಣದ ಅದಿರು, ಡೋಲಮೈಟ್, ಸುಣ್ಣದ ಕಲ್ಲು, ಉಕ್ಕು, ಕಲ್ಲಿದ್ದಲು, ರಸಗೊಬ್ಬರ ಹಾಗೂ ಆಹಾರ ಧಾನ್ಯಗಳ ಸಾಗಣೆಗೆ ಹೆಚ್ಚಿನ ಸಾಮರ್ಥ್ಯ ದೊರೆಯಲಿದ್ದು, ವರ್ಷಕ್ಕೆ 16.22 ಮಿಲಿಯನ್ ಟನ್ ಹೆಚ್ಚುವರಿ ಸರಕು ಸಾಗಣೆ ಸಾಧ್ಯವಾಗಲಿದೆ.
ಪರಿಸರದ ದೃಷ್ಟಿಯಿಂದಲೂ ಯೋಜನೆ ಮಹತ್ವದ್ದಾಗಿದೆ. ರಸ್ತೆ ಸಾರಿಗೆಯ ಮೇಲಿನ ಅವಲಂಬನೆ ಕಡಿಮೆಯಾಗುವುದರಿಂದ ವರ್ಷಕ್ಕೆ ಸುಮಾರು 1.32 ಕೋಟಿ ಲೀಟರ್ ಇಂಧನ ಉಳಿತಾಯವಾಗಲಿದ್ದು, 6.67 ಕೋಟಿ ಕೆ.ಜಿ. ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆ ಕಡಿಮೆಯಾಗಲಿದೆ. ಇದು ಸುಮಾರು 0.27 ಕೋಟಿ ಮರಗಳನ್ನು ನೆಟ್ಟಷ್ಟೇ ಪರಿಸರ ಲಾಭಕ್ಕೆ ಸಮನಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles