ಅಪೂರ್ಣ ಯುಜಿಡಿ ಕಾಮಗಾರಿ ಪೂರ್ಣಗೊಳಿಸಲು ಬಡಾವಣೆ ನಿವಾಸಿಗಳ ಆಗ್ರಹ

ಬೆಳಗಾಯಿತು ವಾರ್ತೆ| Www.belagayithu.in
ಬಳ್ಳಾರಿ: ನಗರದ ಕಪ್ಪಗಲ್ಲು ರಸ್ತೆಯ ಅರ್ಚನ ಹಾಗೂ ಪ್ರಕೃತಿ ಬಡಾವಣೆಗಳಲ್ಲಿ ಅಪೂರ್ಣಗೊಂಡಿರುವ ಒಳಚರಂಡಿ (ಯುಜಿಡಿ) ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸಿ, ಸಾರ್ವಜನಿಕರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಬಡಾವಣೆಯ ನಿವಾಸಿಗಳು ಜಿಲ್ಲಾಡಳಿತವನ್ನು ಆಗ್ರಹಿಸಿದರು.
ನಗರದ ಅನಂತಪುರ ರಸ್ತೆಯಲ್ಲಿರುವ ನೂತನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ, 2024-25ನೇ ಸಾಲಿನಲ್ಲಿ ಶಾಸಕ ನಾರಾ ಭರತ್ ರೆಡ್ಡಿ ಅವರ ಅನುದಾನದಡಿ ವಾರ್ಡ್ ಸಂಖ್ಯೆ 24ರ ಅರ್ಚನ ಮತ್ತು ಪ್ರಕೃತಿ ಬಡಾವಣೆಗಳಲ್ಲಿ 20 ಲಕ್ಷ ವೆಚ್ಚದ ಯುಜಿಡಿ ಕಾಮಗಾರಿಗೆ ಅನುಮೋದನೆ ದೊರೆತಿದ್ದು, 2025-26ನೇ ಸಾಲಿನಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಆರಂಭಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಆದರೆ ರಸ್ತೆಗಳನ್ನು ಅಗೆದು ಪೈಪ್‌ಲೈನ್ ಹಾಗೂ ಕೊಳವೆಗಳನ್ನು ಅಳವಡಿಸಿದ ಬಳಿಕ ಅವುಗಳನ್ನು ಮುಖ್ಯ ಒಳಚರಂಡಿ ಪೈಪ್‌ಲೈನ್‌ಗೆ ಸಂಪರ್ಕಿಸದೆ ಕಾಮಗಾರಿಯನ್ನು ಅರ್ಧದಲ್ಲೇ ಸ್ಥಗಿತಗೊಳಿಸಲಾಗಿದೆ. ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಗುತ್ತಿಗೆದಾರರಿಗೆ ಬಿಲ್ ಪಾವತಿಸಲಾಗಿದೆ ಎಂದು ನಿವಾಸಿಗಳು ಆರೋಪಿಸಿದರು.
ಸುಮಾರು 80ರಿಂದ 100 ಕುಟುಂಬಗಳು ವಾಸಿಸುತ್ತಿರುವ ಬಡಾವಣೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ನಿವಾಸಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಕುರಿತು ಹಲವು ಬಾರಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪೈಪ್‌ಲೈನ್ ಹಾದು ಹೋಗುವ ಸ್ಥಳ ಖಾಸಗಿ ಜಮೀನಾಗಿದ್ದು, ಮಾಸ್ಟರ್ ಪ್ಲಾನ್‌ನಲ್ಲಿ ಅದನ್ನು ರಸ್ತೆಯಾಗಿ ಗುರುತಿಸಲಾಗಿದೆ. ಆದರೆ ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆಯದೆ ಅದೇ ಸ್ಥಳದಲ್ಲಿ ಭೂಗತ ನೀರಿನ ಟ್ಯಾಂಕ್ ನಿರ್ಮಿಸಲು ಮುಂದಾಗಿರುವುದು ಕಾಮಗಾರಿಗೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಬುಡಾ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಕೆ.ಯು.ಡಬ್ಲ್ಯು.ಎಸ್.ಡಿ.ಬಿ.) ಅನುಮೋದನೆಯೊಂದಿಗೆ ಬಡಾವಣೆ ನಿರ್ಮಾಣಗೊಂಡಿದ್ದರೂ, ಯುಜಿಡಿ ಕಾಮಗಾರಿ ಪೂರ್ಣಗೊಳ್ಳದ ಕಾರಣ ಸೆಪ್ಟಿಕ್ ಟ್ಯಾಂಕ್‌ಗಳು ತುಂಬಿ ಕೊಳಚೆ ನೀರು ಹೊರಹರಿಯುತ್ತಿದೆ. ಇದರಿಂದ ದುರ್ವಾಸನೆ, ಸೊಳ್ಳೆಗಳ ಕಾಟ ಹಾಗೂ ಕುಡಿಯುವ ನೀರು ಕಲುಷಿತಗೊಳ್ಳುವ ಆತಂಕ ಎದುರಾಗಿದ್ದು, ಮಕ್ಕಳು ಮತ್ತು ಹಿರಿಯ ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ನಿವಾಸಿಗಳು ದೂರಿದರು.
ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಿ ಅಪೂರ್ಣ ಯುಜಿಡಿ ಕಾಮಗಾರಿಯನ್ನು ಪೂರ್ಣಗೊಳಿಸಿ, ಸಾರ್ವಜನಿಕರ ಆರೋಗ್ಯ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಗದೀಶ್, ಶಂಕರ್, ಹಂಪರೆಡ್ಡಿ, ಬಸವರಾಜ್, ಸುಂದೀಪ್, ಗೋವರ್ಧನ್ ರೆಡ್ಡಿ, ಹನುಮಂತ್ ರೆಡ್ಡಿ, ವೇಣುಗೋಪಾಲ್ ಸೇರಿದಂತೆ ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು.


Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles