ಬೆಳಗಾಯಿತು ವಾರ್ತೆ | www.belagayithu.in
ಹಗರಿಬೊಮ್ಮನಹಳ್ಳಿ : ತಾಲೂಕಿನ ಗ್ರಾಮೀಣ ಪ್ರದೇಶಗಳ ರಸ್ತೆಗಳ ದುಸ್ಥಿತಿಗೆ ವಿರೋಧ ವ್ಯಕ್ತಪಡಿಸಿ, ದುರಸ್ತಿಕಾರ್ಯ ಕೈಗೊಳ್ಳುವಂತೆ ಆಗ್ರಹಿಸಿ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ತಾಲ್ಲೂಕಿನ ತಂಬ್ರಹಳ್ಳಿಯಿಂದ ಹಗರಿಬೊಮ್ಮನಹಳ್ಳಿ ವರೆಗೆ ಬೈಕ್ ರ‍್ಯಾಲಿ ನಡೆಸಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಬಳಿಕ ತಹಶೀಲ್ದಾರ್ ಕಚೇರಿಗೆ ಹಾಗೂ ಪಿಡಬ್ಲ್ಯೂಡಿ ಇಲಾಖೆಗೆ ತೆರಳಿ ಮನವಿಪತ್ರ ಸಲ್ಲಿಸಿದರು.
ರಾಜ್ಯ ಎಸ್ಸಿ-ಎಸ್ಟಿ ಘಟಕದ ಅಧ್ಯಕ್ಷ ಪಾಯ್. ಗಣೇಶ್ ಮಾತನಾಡಿ, ತಂಬ್ರಹಳ್ಳಿಯಿಂದ ತಾಲೂಕು ಕೇಂದ್ರ ಹಗರಿಬೊಮ್ಮನಹಳ್ಳಿವರೆಗೆ ಸುಮಾರು 17 ಕಿ.ಮೀ ರಸ್ತೆ ತಗ್ಗು-ಗುಂಡಿಗಳಿಂದ ತುಂಬಿ ಸಂಪೂರ್ಣ ಹದಗೆಟ್ಟಿದೆ. ಪ್ರತಿದಿನ ಸಂಚರಿಸುವ ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ತಾಲೂಕಿನ ಬಹುತೇಕ ಗ್ರಾಮೀಣ ರಸ್ತೆಗಳ ಸ್ಥಿತಿ ಇದೇ ರೀತಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ತಕ್ಷಣ ತಾಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕಾರ್ಯದರ್ಶಿ ಹರಕುಣಿ ಗಣೇಶ್ ಮಾತನಾಡಿ, ರಸ್ತೆ ದುಸ್ಥಿತಿಯಿಂದ ಗ್ರಾಮಗಳಿಂದ ಪಟ್ಟಣ ತಲುಪಲು ಬೇಕಾಗುವ ಸಮಯ ದ್ವಿಗುಣವಾಗಿದೆ. 15–20 ನಿಮಿಷದಲ್ಲಿ ತಲುಪಬಹುದಾದ ದೂರಕ್ಕೆ ಈಗ ಒಂದು ಗಂಟೆಗೂ ಅಧಿಕ ಸಮಯ ಬೇಕಾಗಿದೆ ಎಂದು ಆರೋಪಿಸಿದರು. ರಸ್ತೆಗಳಿಂದ ಏಳುವ ಧೂಳು ಪಕ್ಕದ ಜಮೀನುಗಳಿಗೆ ಸೇರಿ ರೈತರ ಬೆಳೆ ಹಾನಿಯಾಗುತ್ತಿದೆ ಎಂದು ದೂರಿದರು.
ತಾಲೂಕು ಅಧ್ಯಕ್ಷ ಗುರುಬಸವರಾಜ ಮಾತನಾಡಿ, ದುಸ್ಥಿತಿಯ ರಸ್ತೆಗಳ ಕಾರಣದಿಂದ ಗರ್ಭಿಣಿಯರು ಹಾಗೂ ಮಕ್ಕಳಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಕೆಲ ಸಂದರ್ಭಗಳಲ್ಲಿ ದಾರಿಯಲ್ಲಿಯೇ ಹೆರಿಗೆ ನೋವು ಕಾಣಿಸಿಕೊಂಡಿರುವ ಘಟನೆಗಳು ನಡೆದಿವೆ. ಅಪಘಾತಗಳೂ ಹೆಚ್ಚಾಗಿದ್ದು, ಕೆಲವರು ಗಾಯಗೊಂಡು ಅಂಗವೈಕಲ್ಯಕ್ಕೂ ಒಳಗಾಗಿದ್ದಾರೆ ಎಂದು ವಿವರಿಸಿದರು.
ಇದಕ್ಕೂ ಮುನ್ನ ತಂಬ್ರಹಳ್ಳಿಯಿಂದ ನೂರಾರು ಬೈಕ್‌ಗಳಲ್ಲಿ ಕಾರ್ಯಕರ್ತರು ಹಗರಿಬೊಮ್ಮನಹಳ್ಳಿ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಬಸವೇಶ್ವರ ಪುತ್ಥಳಿವರೆಗೆ ರ‍್ಯಾಲಿ ನಡೆಸಿ, ಉಪ ತಹಸೀಲ್ದಾರ್ ಶಿವಕುಮಾರಗೌಡ ಹಾಗೂ ಲೋಕೋಪಯೋಗಿ ಇಲಾಖೆಯ ಎಇಇ ಸತೀಶ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ರೈತ ಕಾರ್ಯದರ್ಶಿ ನಿರೂಪಾದಿ ಗೋಮರ್ಸಿ, ಜಿಲ್ಲಾಧ್ಯಕ್ಷ ಸುಭಾನ್ ಹುಗುಲೂರು, ಜಿಲ್ಲಾ ಉಪಾಧ್ಯಕ್ಷ ಚನ್ನವೀರ ಚಿತ್ತಾರ, ಕೂಡ್ಲಿಗಿ ತಾಲೂಕು ಅಧ್ಯಕ್ಷ ಶರಣಪ್ಪ, ತಾಲೂಕು ಉಪಾಧ್ಯಕ್ಷ ಪಾಂಡುರಂಗ, ಹೋರಾಟಗಾರ ಕೊಟಿಗಿ ಮಲ್ಲಿಕಾರ್ಜುನ, ಬಿಜಾಪುರ ಲಕ್ಷ್ಮೀ,ಕೃಷ್ಣಾಪುರ ಕುರಿ ನಾಗೇಂದ್ರ, ಕೆ.ಶಾಂತಕುಮಾರ, ವಾಲಾಪುರ ಬಸವರಾಜ್,ಆನೆಕಲ್ಲು ಕೊಟ್ರೇಶ್ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಬಸವನಗೌಡ, ಗ್ರಾಕೋಸ್ ಸಂಚಾಲಕ ಮಲ್ಲೇಶ ಕೋಗಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.





