ಬೆಳಗಾಯಿತು ವಾರ್ತೆ | www.belagyithu.in
ಬೆಂಗಳೂರು : ಕನ್ನಡ ಈಗ ಜಾಗತಿಕ ಭಾಷೆಯಾಗಿದೆ, ವ್ಯಾಟಿಕನ್ ರೇಡಿಯೋ-ವ್ಯಾಟಿಕನ್ ನ್ಯೂಸ್ ಗೆ 53ನೇ ಭಾಷೆಯಾಗಿ ಕನ್ನಡ ಭಾಷೆಯು ಸೇರ್ಪಡೆಗೊಂಡಿದೆ. ಇನ್ನೂ ಮುಂದೆ ವ್ಯಾಟಿಕನ್ ಸುದ್ದಿತಾಣವು ಕನ್ನಡ ಭಾಷೆಯಲ್ಲೂ ಮೂಡಿ ಬರಲಿದೆ. ವ್ಯಾಟಿಕನ್ನಿನ ಸಂವಹನ ಪೀಠ ಹಾಗೂ ಬೆಂಗಳೂರು ಮಹಾಧರ್ಮಕ್ಷೇತ್ರದ ಸಹಯೋಗದಲ್ಲಿ ಈ ಬೆಳವಣಿಗೆ ನಡೆದಿದೆ.
ವ್ಯಾಟಿಕನ್ ಸುದ್ದಿತಾಣದ ಸುದ್ದಿಗಳು ಕನ್ನಡದಲ್ಲಿ ಆರಂಭವಾಗುತ್ತಿರುವುದು ನನಗೆ ಅತೀವ ಸಂತಸ ತಂದಿದೆ. ಕರ್ನಾಟಕದ ಧರ್ಮಸಭೆಗೆ ವಿಶ್ವಗುರುಗಳ, ಧರ್ಮಸಭೆಯ ಹಾಗೂ ಜಾಗತಿಕ ವಿದ್ಯಾಮಾನಗಳ ಸುದ್ದಿಗಳು ಕನ್ನಡದಲ್ಲಿ ದೊರಕಿರುವುದು ಅದ್ಭುತವಾಗಿದೆ, ಮಾತ್ರವಲ್ಲದೆ ಅತೀ ಮುಖ್ಯವೂ ಆಗಿದೆ. ಧರ್ಮಸಭೆಯನ್ನು ಪ್ರಪಂಚದ ಎಲ್ಲಾ ಗಡಿಗಳಿಗೂ ವಿಸ್ತರಿಸುತ್ತಿರುವ ಪೋಪ್ ಫ್ರಾನ್ಸಿಸರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಬೆಂಗಳೂರಿನ ಮಹಾಧರ್ಮಾಧ್ಯಕ್ಷರಾದ ಡಾ. ಪೀಟರ್ ಮಚಾದೊ ಹೇಳಿದ್ದಾರೆ.
ಈ ಯೋಜನೆಗೆ ಸುಮಾರು 24 ತಿಂಗಳುಗಳ ಕಾಲ ಸಿದ್ಧತೆಗಳು ನಡೆದವು. ಕಳೆದ ಮೂರು ತಿಂಗಳು ಅತಿ ನಿರ್ಣಾಯಕವಾಗಿತ್ತು, ಅಂತಿಮವಾಗಿ ಮಂಗಳವಾರ ಚಾಲನೆ ನೀಡಲಾಗಿದೆ ಎಂದು ಅವರು ಹೇಳಿದರು.