ಬೆಳಗಾಯಿತು ವಾರ್ತೆ | Www.belagayithu.in
ಬೆಳಗಾವಿ/ಬಳ್ಳಾರಿ:ಒಂದು ಸಾವಿರದ ಎಂಭತ್ತೊಂಬತ್ತು ದಿನಗಳಿಂದ ಕುಡತಿನಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ 12000 ಎಕರೆ ಭೂಮಿಯ ಭೂ ಸಂತ್ರಸ್ತ ರೈತರ ಬೇಡಿಕೆಗಳನ್ನು ಮಾನವೀಯತೆಯ ಆಧಾರದ ಮೇಲೆ ಶೀಘ್ರದಲ್ಲೇ ಈಡೇರಿಸಬೇಕು ಎಂದು ಬಳ್ಳಾರಿ – ವಿಜಯನಗರ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಸದಸ್ಯರಾದ ವೈ.ಎಂ. ಸತೀಶ್ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಬೆಳಗಾವಿಯ `ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಎರಡನೇ ದಿನವಾದ ಮಂಗಳವಾರ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲಭೂತ ಅಭಿವೃದ್ಧಿ ಸಚಿವರಾದ ಎಂ.ಬಿ. ಪಾಟೀಲ್ ಅವರಲ್ಲಿ ಪ್ರಶ್ನೆ ಕೇಳಿದ ಶಾಸಕ ವೈ.ಎಂ. ಸತೀಶ್ ಅವರು, ಕುಡತಿನಿ, ವೇಣಿವೀರಾಪುರ, ಸಿದ್ದಮ್ಮನಹಳ್ಳಿ, ಹರಗಿನಡೋಣಿ ಸೇರಿ ಸುತ್ತಲಿನ ವಿವಿಧ ಗ್ರಾಮಗಳ ಭೂಮಿಗಳನ್ನು ಸರ್ಕಾರ (ಕೆಐಡಿಬಿ) ಸ್ವಾಧೀನ ಮಾಡಿಕೊಂಡು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳಿಗೆ ನೀಡಿದೆ. ಆದರೆ, ಕೈಗಾರಿಕೆಗಳು ಪ್ರಾರಂಭವಾಗದೇ ಉದ್ಯೋಗ ಸಿಗದೇ ಭೂ ಸಂತ್ರಸ್ತರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಈಡಾಗುತ್ತಿವೆ. ಅಲ್ಲದೇ, ಹೆಚ್ಚಿನ ಪರಿಹಾರ ನೀಡಲು ವಿವಿಧ ನ್ಯಾಯಾಲಯಗಳು ಆದೇಶ ನೀಡಿದ್ದು, ಪ್ರತಿಭಟನೆ ನಡೆಸುತ್ತಿರುವ ಭೂ ಸಂತ್ರಸ್ತರ ಬೇಡಿಕೆಗಳನ್ನು ಸರ್ಕಾರ ಮಾನವೀಯತೆಯ ಆಧಾರದ ಮೇಲೆ ತ್ವರಿತವಾಗಿ ಈಡೇರಿಸಬೇಕು ಎಂದು ಆಗ್ರಹಿಸಿದರು.





