ಬೆಳಗಾಯಿತು ವಾರ್ತೆ | Www.belagayithu.in
ಬಳ್ಳಾರಿ: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ವ್ಯಾಪ್ತಿಗೆ ಬರುವ ಕಾಲೇಜುಗಳು ಸುಮಾರು 10 ಕೋಟಿ ರೂ ಮೊತ್ತದ ವಿದ್ಯಾರ್ಥಿಗಳ ಶುಲ್ಕವನ್ನು ಬಾಕಿ ಉಳಿಸಿಕೊಂಡಿವೆ. ಹೀಗಾಗಿ ವಿದ್ಯಾರ್ಥಿಗಳ ಶುಲ್ಕ ಬಾಕಿ ಉಳಿಸಿಕೊಂಡ ಕಾಲೇಜುಗಳಿಗೆ ವಿವಿ ನೋಟಿಸ್ ನೀಡುವ ಮೂಲಕ ಚಾಟಿ ಬೀಸಿದೆ. ಒಂದು ವೇಳೆ ಬಾಕಿ ಪಾವತಿಸದಿದ್ದರೆ ವಿದ್ಯಾರ್ಥಿಗಳ ಪ್ರವೇಶಾತಿ ಮತ್ತು ಪರೀಕ್ಷೆಗೂ ಅನುಮತಿ ನಿರಾಕರಿಸುವುದಾಗಿ ಎಚ್ಚರಿಕೆ ನೀಡಿದೆ.
ಗಣಿನಾಡು ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು 2018-19ನೇ ಸಾಲಿನಿಂದ ಈವರೆಗೆ ವಿದ್ಯಾರ್ಥಿಗಳ ಶುಲ್ಕ ಪಾವತಿ ಬಾಕಿ ಉಳಿಸಿಕೊಂಡ ಕಾಲೇಜುಗಳಿಗೆ ಇದೀಗ ನೋಟಿಸ್ ಮೂಲಕ ಚಾಟಿ ಬೀಸಿದೆ. ಈ ವಿವಿ ವ್ಯಾಪ್ತಿಗೆ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ 10 ಸ್ನಾತಕೋತ್ತರ ಕೇಂದ್ರ, 50 ಪದವಿ ಹಾಗೂ 14 ಬಿ.ಎಡ್ ಕಾಲೇಜುಗಳು ಒಳಪಡುತ್ತಿವೆ. ಇದರಲ್ಲಿ 15 ಸರಕಾರಿ ಕಾಲೇಜುಗಳಿವೆ. ಬಹುತೇಕ ಕಾಲೇಜುಗಳು ವಿದ್ಯಾರ್ಥಿಗಳ ಪಾವತಿ ಶುಲ್ಕವನ್ನು ಬಾಕಿ ಉಳಿಸಿಕೊಂಡಿವೆ.





