ಪಾಲಿಕೆ ಸಾಮಾನ್ಯ ಸಭೆ: ನೀರಿನ ಸಮಸ್ಯೆ ಸರಿ ಪಡಿಸಲು ಸದಸ್ಯರ ಆಗ್ರಹ

ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ನಗರದಲ್ಲಿ 10 ದಿನಕ್ಕೊಮ್ಮೆ ನೀರು ಸರಬರಾಜು ಮಾಡುತ್ತಿರುವುದರಿಂದ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದು, ನೀರು ಸರಬರಾಜಿನ ಅವಧಿಯನ್ನು 10 ದಿನಗಳಿಂದ 8 ದಿನಗಳಿಗೆ ಕಡಿತಗೊಳಿಸಬೇಕು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಪಾಲಿಕೆ ಸದಸ್ಯರು ಆಗ್ರಹಿಸಿದರು.

ಗುರುವಾರ ಜಿಲ್ಲಾ ಪಂಚಾಯತ್ ಕಚೇರಿಯ ಅಬ್ದುಲ್ ನಜೀರ್ ಸಭಾಂಗಣದಲ್ಲಿ ಮಹಾಪೌರ ಪಿ.ಗಾದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ಮಾತನಾಡಿದರು.

ಸಭೆಯ ಆರಂಭದಲ್ಲಿ ಫೆಬ್ರವರಿ 23, 2026ರಂದು ನಡೆದ ಸಾಮಾನ್ಯ ಸಭೆಯ ನಡವಳಿಗಳನ್ನು ಓದಿ ಖಾಯಂ ಗೊಳಿಸಲಾಯಿತು. ಬಳಿಕ ಮಹಾನಗರ ಪಾಲಿಕೆಯ ಚುನಾಯಿತ ಹಾಗೂ ನಾಮನಿರ್ದೇಶಿತ ಸದಸ್ಯರು ಸೇರಿದಂತೆ ಒಟ್ಟು 50 ಜನರನ್ನು ಇಂದೊರ ನಗರಕ್ಕೆ ಅಧ್ಯಯನ ಪ್ರವಾಸಕ್ಕೆ ಕಳುಹಿಸುವ ಪ್ರಸ್ತಾವನೆ ಮಂಡಿಸಲಾಯಿತು. ಘನತ್ಯಾಜ್ಯ ನಿರ್ವಹಣೆಯಲ್ಲಿ ಮಾದರಿ ನಗರವಾದ ಇಂದೋರ್‌ನ ವ್ಯವಸ್ಥೆಯನ್ನು ಅಧ್ಯಯನ ಮಾಡಲು ಏಪ್ರಿಲ್ 5ರಿಂದ 8ರವರೆಗೆ ಪ್ರವಾಸ ಕೈಗೊಳ್ಳಲು ಉದ್ದೇಶಿಸಲಾಯಿತು.
ಇದೇ ವೇಳೆ, ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಬಾಕಿ ಇರುವ ನೀರಿನ ಬಳಕೆದಾರರ ಶುಲ್ಕ ಹಾಗೂ ಆಸ್ತಿ ತೆರಿಗೆ ಸಂಗ್ರಹಣೆಯನ್ನು ಪರಿಣಾಮಕಾರಿಯಾಗಿ ನಡೆಸಲು ಮಹಿಳಾ ಸ್ವಸಹಾಯ ಸಂಘಗಳ ಸೇವೆಗಳನ್ನು ಬಳಸಿಕೊಳ್ಳುವ ಕುರಿತು ಚರ್ಚೆ ನಡೆಯಿತು. ಪ್ರತಿ ವಾರ್ಡ್‌ಗೆ ಒಂದು ಸ್ವಸಹಾಯ ಸಂಘವನ್ನು ನಿಯೋಜಿಸಿ ವಸೂಲಾತಿ ಕಾರ್ಯ ಕೈಗೊಳ್ಳುವ ಪ್ರಸ್ತಾವನೆ ಮಂಡಿಸಲಾಯಿತು. ಆಯ್ಕೆಯಾದ ಸಂಘಗಳಿಗೆ ಸಂಗ್ರಹಿಸಿದ ಮೊತ್ತದ ಮೇಲೆ ಶೇ.5ರಷ್ಟು ಪ್ರೋತ್ಸಾಹಧನ ನೀಡುವ ವಿಚಾರಕ್ಕೂ ಅನುಮೋದನೆ ಕೋರಿ ಚರ್ಚೆ ನಡೆಯಿತು.
ನಗರದಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ, ಸ್ವಚ್ಛತೆ, ರಸ್ತೆ, ಒಳಚರಂಡಿ ಸೇರಿದಂತೆ ಸಾರ್ವಜನಿಕ ಸಮಸ್ಯೆಗಳ ಕುರಿತು ಸದಸ್ಯರು ಚರ್ಚೆ ನಡೆಸಿ ಆಡಳಿತದ ಗಮನಕ್ಕೆ ತಂದರು. ಮಹಾಪೌರರ ಅನುಮತಿ ಮೇರೆಗೆ ಇತರೆ ವಿಷಯಗಳನ್ನೂ ಸಭೆಯಲ್ಲಿ ಪರಿಗಣಿಸಲಾಯಿತು.
ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿಯ ಅಧ್ಯಕ್ಷ ವಿ.ಕುಬೇರ, ಪಾಲಿಕೆಯ ಕಮಿಷನರ್ ಮಂಜುನಾಥ್, ಪಾಲಿಕೆ ಸದಸರುಗಳಾದ ಇಬ್ರಾಹಿಂ ಬಾಬು, ಹನುಮಂತಪ್ಪ, ಕವಿತಾ ಕೆ ಹೊನ್ನಪ್ಪ, ಮೋತ್ಕರ್ ಶ್ರೀನಿವಾಸ್, ಗೋವಿಂದ್ ಬಾಬು, ಕೆಎಸ್ ಅಶೋಕ್ ಕುಮಾರ್, ನೂರ್ ಮೊಹಮ್ಮದ್, ಹರ್ಷದ್ ಸೇರಿದಂತೆ ಅನೇಕ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles