ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಟೋ ಗ್ಯಾಸ್ ಕೊರತೆ ತೀವ್ರವಾಗುತ್ತಿದ್ದು, ಬಳ್ಳಾರಿಯಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ.
ಆಟೋ ಚಾಲಕರು ಗ್ಯಾಸ್ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದು, ಸಾರ್ವಜನಿಕರು ಕೂಡ ಪರದಾಡುವಂತಾಗಿದೆ.
ನಗರದಲ್ಲಿ ಗ್ಯಾಸ್ ಲಭ್ಯತೆ ಇಲ್ಲದ ಕಾರಣ, ಆಸ್ಪತ್ರೆಗೆ ಹೋಗಬೇಕಿದ್ದ ಬಾಣಂತಿ ಮಹಿಳೆ ಗ್ಯಾಸ್ ಬಂಕ್ ಬಳಿ ಸಿಲುಕಿಕೊಂಡು ಕಷ್ಟ ಅನುಭವಿಸಿದ್ದಾರೆ. ತುರ್ತು ಚಿಕಿತ್ಸೆ ಅಗತ್ಯವಿದ್ದರೂ ಸಮಯಕ್ಕೆ ವಾಹನ ಸಿಗದೆ ಪರದಾಟ ಎದುರಿಸಬೇಕಾಯಿತು.
ಇನ್ನೊಂದೆಡೆ, ಗ್ಯಾಸ್ ಮುಗಿದ ಕಾರಣ ಆಟೋ ಚಾಲಕರೊಬ್ಬರು ಸುಮಾರು ಐದರಿಂದ ಆರು ಕಿಲೋಮೀಟರ್ ದೂರದವರೆಗೆ ತಮ್ಮ ಆಟೋವನ್ನು ತಳ್ಳಿಕೊಂಡು ಹೋಗಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಈ ಘಟನೆಗಳು ಆಟೋ ಗ್ಯಾಸ್ ಕೊರತೆಯ ತೀವ್ರತೆಯನ್ನು ತೋರಿಸುತ್ತಿವೆ.
ಗ್ಯಾಸ್ ಸಮಸ್ಯೆಯಿಂದ ದಿನನಿತ್ಯದ ಜೀವನಕ್ಕೆ ಅಡ್ಡಿ ಉಂಟಾಗಿದ್ದು, ತಕ್ಷಣ ಸಮಸ್ಯೆ ಪರಿಹರಿಸುವಂತೆ ಸಾರ್ವಜನಿಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಗ್ಯಾಸ್ ಪೂರೈಕೆಯನ್ನು ಶೀಘ್ರ ಸಾಮಾನ್ಯಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹ ವ್ಯಕ್ತವಾಗಿದೆ.





