ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ನಗರದ ಹೊಸ ಜಿಲ್ಲಾಡಳಿತ ಭವನದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಕುರಿತು ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭವನದಲ್ಲಿರುವ ಲಿಫ್ಟ್ ಸುಮಾರು ಆರು ತಿಂಗಳಿನಿಂದ ಕೆಟ್ಟು ಹೋಗಿದ್ದು, ನಾಗರಿಕರು ಹಾಗೂ ಸಿಬ್ಬಂದಿಗೆ ಮೇಲ್ಮಹಡಿಗಳಿಗೆ ತೆರಳುವುದು ಕಷ್ಟಕರವಾಗಿದೆ. ವಿಶೇಷವಾಗಿ ವೃದ್ಧರು ಮತ್ತು ಅಂಗವಿಕಲರಿಗೆ ಹೆಚ್ಚಿನ ತೊಂದರೆ ಉಂಟಾಗುತ್ತಿದೆ.
ಇದಲ್ಲದೆ, ಶೌಚಾಲಯಗಳಲ್ಲಿ ನೀರಿನ ಟ್ಯಾಪ್‌ಗಳು ಮುರಿದು ಹೋಗಿ ಸುಮಾರು ಆರು ತಿಂಗಳಾದರೂ ದುರಸ್ತಿ ಕಾರ್ಯ ಕೈಗೊಳ್ಳಲಾಗಿಲ್ಲ. ಕುಡಿಯುವ ನೀರಿನ ಫಿಲ್ಟರ್ ಕೂಡ ಕೆಟ್ಟು ಹೋಗಿರುವುದರಿಂದ ಭವನಕ್ಕೆ ಬರುವ ಸಾರ್ವಜನಿಕರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಸಮಸ್ಯೆಗಳ ಕುರಿತು ಸಾರ್ವಜನಿಕರು ಹಾಗೂ ಸಿಬ್ಬಂದಿ ಸುಮಾರು ಹತ್ತು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲವೆಂದು ಆರೋಪಿಸಿದ್ದಾರೆ.
ತಕ್ಷಣವೇ ಲಿಫ್ಟ್, ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ದುರಸ್ತಿ ಮಾಡಿ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.





