ಬೆಳಗಾಯಿತು ವಾರ್ತೆ | http://www.belagayithu.in
ಸಂಜಯ್ ದತ್ ಮತ್ತು ನೋರಾ ಫತೇಹಿ ನಟಿಸಿದ ‘ಸರ್ಕೆ ಚುನರ್ ತೇರಿ’ ಹಾಡಿನ ವಿರುದ್ಧ ದೇಶಾದ್ಯಂತ ವ್ಯಕ್ತವಾದ ತೀವ್ರ ಆಕ್ರೋಶದ ಬೆನ್ನಲ್ಲೇ, ಕೇಂದ್ರ ಸರ್ಕಾರ ಈ ಹಾಡನ್ನು ಅಧಿಕೃತವಾಗಿ ನಿಷೇಧಿಸಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಲೋಕಸಭೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಧ್ರುವ ಸರ್ಜಾ ನಟನೆಯ, ಜೋಗಿ ಪ್ರೇಮ್ ನಿರ್ದೇಶನದ ‘ಕೆಡಿ’ (KD) ಸಿನಿಮಾದ ಈ ಹಾಡಿನಿಂದ ಇಡೀ ಕನ್ನಡ ಚಿತ್ರರಂಗಕ್ಕೆ ಮುಜುಗರ ಆದಂತಾಗಿದೆ.
ಸಮಾಜವಾದಿ ಪಕ್ಷದ ಸಂಸದ ಆನಂದ್ ಬಡೋರಿಯಾ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಅಶ್ವಿನಿ ವೈಷ್ಣವ್, ‘ಈ ಹಾಡನ್ನು ಈಗಾಗಲೇ ನಿಷೇಧಿಸಲಾಗಿದೆ. ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವು ಸಂಪೂರ್ಣ ಪ್ರಶ್ನಾತೀತವಲ್ಲ. ಸಂವಿಧಾನದ ರಚನೆಕಾರರು ವಿಧಿಸಿರುವ ಸಮಂಜಸವಾದ ನಿರ್ಬಂಧಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು’ ಎಂದು ತಿಳಿಸಿದರು. ಸಂವಿಧಾನದ ವಿಧಿ 19(2) ಉಲ್ಲೇಖಿಸಿದ ಸಚಿವರು, ಸಾರ್ವಜನಿಕ ಸುವ್ಯವಸ್ಥೆ, ಸಭ್ಯತೆ ಮತ್ತು ನೈತಿಕತೆಗೆ ಧಕ್ಕೆ ಬಂದಾಗ ಇಂತಹ ನಿರ್ಬಂಧಗಳನ್ನು ಹೇರಲು ಸರ್ಕಾರಕ್ಕೆ ಅಧಿಕಾರವಿದೆ ಎಂದು ಹೇಳಿದರು.





