ಬೆಳಗಾಯಿತು ವಾರ್ತೆ |www.belagayithu.in
ಬಳ್ಳಾರಿ: ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಬಳಕೆಯನ್ನು ತಡೆಗಟ್ಟಲು ಶಿಕ್ಷಣ ಸಂಸ್ಥೆಗಳ ಮಟ್ಟದಲ್ಲೇ ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಅಗತ್ಯವಿದೆ ಎಂದು ರಾಜೀವ್‌ಗಾಂಧಿ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಬಿ.ಸಿ.ಭಗವಾನ್ ಅಭಿಪ್ರಾಯಪಟ್ಟರು. ನಗರದ ರಾಯಲ್ ಫೋರ್ಟ್ ಹೋಟೆಲ್ ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತರಲಾಗುತ್ತಿದೆ. ಪ್ರತಿ ಕ್ಯಾಂಪಸ್ ಸೇರಿದಂತೆ ಸಂಯೋಜಿತ ಎಲ್ಲಾ ಕಾಲೇಜುಗಳಲ್ಲಿ ಈ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲು ಸೂಚಿಸಲಾಗಿದೆ ಎಂದರು.
ವಿಶ್ವವಿದ್ಯಾಲಯಕ್ಕೆ ಸಂಯೋಜನೆಗೊಂಡಿರುವ ಎಲ್ಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ದೊರಕಬೇಕು. ಯಾವುದೇ ವಿದ್ಯಾರ್ಥಿ ಅಥವಾ ಸಂಸ್ಥೆಯಿಂದ ಮನವಿ ಬಂದರೆ, ಕಾಲೇಜುಗಳಲ್ಲೂ ಮಾದಕ ವಸ್ತು ವಿರೋಧಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಸಂಯೋಜಿತ ಕಾಲೇಜುಗಳಲ್ಲಿ ನಡೆಯುವ ಕಾರ್ಯಕ್ರಮಗಳ ಜವಾಬ್ದಾರಿ ಸಂಬಂಧಿತ ಮ್ಯಾನೇಜೆಂಟ್‌ಗಳ ಮೇಲಿದೆ ಎಂದು ಸ್ಪಷ್ಟಪಡಿಸಿದರು.
ದೇಶದ ಮಟ್ಟದಲ್ಲಿ ಸುಮಾರು ಶೇ.30 ರಿಂದ ಶೇ.40 ರಷ್ಟಯ ವಿದ್ಯಾರ್ಥಿಗಳು ಮಾದಕ ವಸ್ತುಗಳ ಬಳಕೆಯತ್ತ ತಿರುಗುತ್ತಿದ್ದಾರೆ ಎಂಬ ವರದಿಗಳು ಲಭ್ಯವಾಗಿದ್ದು, ಇದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯವಾಗಿದ್ದು, ಮೊದಲ ಹಂತದಲ್ಲೇ ವಿಶ್ವವಿದ್ಯಾಲಯ ಮಟ್ಟದಲ್ಲಿ ವಿಶೇಷ ಅಭಿಯಾನ ಆರಂಭಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿವನಾಗರೆಡ್ಡಿ, ಮಧು ಸುಧನ್,ರಾಜಶೇಖರ್ ಗಾಣಿಗೇರ್ ಮತ್ತಿತರರು ಹಾಜರಿದ್ದರು.





