ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಹಳ್ಳಕ್ಕೆ ಬಿದ್ದ ಪರಿಣಾಮ ಚಾಲಕನಿಗೆ ಗಾಯವಾದ ಘಟನೆ ನಗರದ ಅಂದ್ರಾಳು ಪ್ರದೇಶದ ಬಳಿ ಮಂಗಳವಾರ ನಡೆದಿದೆ.
ಕಣೆಕಲ್ಲು ಬಸ್ ನಿಲ್ದಾಣದಿಂದ ಅಂದ್ರಾಳು ಕಡೆಗೆ ವೇಗವಾಗಿ ಚಲಿಸುತ್ತಿದ್ದ ಕಾರು ಏಕಾಏಕಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಬೃಹತ್ ಹಳ್ಳಕ್ಕೆ ಬಿದ್ದಿದೆ ಎಂದು ತಿಳಿದು ಬಂದಿದೆ
ಕಾರಿನಲ್ಲಿ ಚಾಲಕನೊಬ್ಬನೇ ಇದ್ದನು ಎನ್ನಲಾಗುತ್ತಿದ್ದು, ಘಟನೆ ನಡೆದ ತಕ್ಷಣ ಸ್ಥಳೀಯರು ನೆರವಿಗೆ ಧಾವಿಸಿ ಗಾಯಗೊಂಡ ಚಾಲಕನನ್ನು ರಕ್ಷಿಸಿ, ತಕ್ಷಣವೇ ಬೀಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಚಾಲಕನ ಆರೋಗ್ಯ ಸ್ಥಿತಿ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಘಟನೆ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ




