ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ವಿರೋಧ ಖಂಡಿಸಿ ಪ್ರತಿಭಟನೆ

ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ಕೇಂದ್ರ ಸರ್ಕಾರ ಮಂಡಿಸಿರುವ ಮಹಿಳಾ ಮೀಸಲಾತಿ ಮಸೂದೆಗೆ ಕಾಂಗ್ರೆಸ್ ಪಕ್ಷ ವಿರೋಧ ವ್ಯಕ್ತಪಡಿಸಿರುವುದನ್ನು ಖಂಡಿಸಿ, ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ವತಿಯಿಂದ ನಗರದಲ್ಲಿ ಭಾರೀ ಪ್ರತಿಭಟನೆ ನಡೆಯಿತು.
ನಗರದ ಜಿಲ್ಲಾ ಜೆಡಿಎಸ್ ಕಚೇರಿಯಿಂದ ರಾಯಲ್ ವೃತ್ತದವರೆಗೆ ನಡೆದ ಈ ಪ್ರತಿಭಟನಾ ರ್ಯಾಲಿಯಲ್ಲಿ, ಮಹಿಳಾ ಕಾರ್ಯಕರ್ತರು ಹಾಗೂ ಮುಖಂಡರು ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಮಹಿಳಾ ಜಿಲ್ಲಾಧ್ಯಕ್ಷೆ ಪುಷ್ಪ ಜಮೀಲಾ ಶಬಾನ ಅವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ, “ಮಹಿಳೆಯರಿಗೆ 33 ಶೇಕಡಾ ರಾಜಕೀಯ ಮೀಸಲಾತಿ ನೀಡುವ ಮಸೂದೆಗೆ ವಿರೋಧ ವ್ಯಕ್ತಪಡಿಸುವ ಮೂಲಕ ಕಾಂಗ್ರೆಸ್ ಮಹಿಳಾ ವಿರೋಧಿ ಧೋರಣೆ ತೋರಿದೆ” ಎಂದು ಆರೋಪಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪುಷ್ಪ ಜಮೀಲಾ ಶಬಾನ, “ಮಹಿಳೆಯರಿಗೆ ರಾಜಕೀಯವಾಗಿ ಸಮಾನ ಅವಕಾಶ ಕಲ್ಪಿಸುವುದು ಪ್ರಜಾಪ್ರಭುತ್ವದ ಮೂಲ ತತ್ವ. 33% ಮೀಸಲಾತಿ ಮಸೂದೆ ಮಹಿಳೆಯರ ಹಕ್ಕುಗಳ ರಕ್ಷಣೆಗೆ ಅಗತ್ಯ. ಕಾಂಗ್ರೆಸ್‌ನ ವಿರೋಧ ಮಹಿಳೆಯರ ಆಶೆಗಳಿಗೆ ಧಕ್ಕೆ ತರುತ್ತದೆ,” ಎಂದು ಹೇಳಿದರು.
ಅವರು ಮುಂದುವರಿದು, “ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವಾಗ, ರಾಜಕೀಯದಲ್ಲೂ ಅವರಿಗೆ ಸಮಾನ ಅವಕಾಶ ನೀಡಬೇಕು. ಜೆಡಿಎಸ್ ಪಕ್ಷ ಸದಾ ಮಹಿಳಾ ಸಬಲೀಕರಣಕ್ಕೆ ಬದ್ಧವಾಗಿದೆ,” ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ, “ಕಾಂಗ್ರೆಸ್ ಮಹಿಳೆಯರ ರಾಜಕೀಯ ಹಕ್ಕುಗಳನ್ನು ಕಸಿದುಕೊಳ್ಳಲು ಯತ್ನಿಸುತ್ತಿದೆ. ಕೇಂದ್ರ ಸರ್ಕಾರ ತಕ್ಷಣವೇ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತರಬೇಕು,” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವಿಜಯ, ರೆಹಮತ್, ರಾಜೇಶ್ವರಿ, ಮಮತಾ, ಶಿವಗಂಗಾ, ಶಿರೀಷಾ ಸೇರಿದಂತೆ ಹಲವು ಮಹಿಳಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ಜೊತೆಗೆ ನಗರ ಘಟಕದ ಅಧ್ಯಕ್ಷ ಹೊನ್ನೂರು ಸ್ವಾಮಿ (ವಂಡ್ರಿ), ಕಂಪ್ಲಿ ಅಧ್ಯಕ್ಷ ಮೇಘರಾಜ್, ಶಿವು ನಾರಾಯಣ, ವಸಂತ್ ಕುಮಾರ್, ಮುತ್ತು, ಜಾವೀದ್, ಹೊನ್ನೂರು ಅಲಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles