ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ವಿಶ್ವಗುರು, ಜಗಜ್ಯೋತಿ ಅಣ್ಣ ಬಸವಣ್ಣನವರ ಜಯಂತಿಯನ್ನು ಸೋಮವಾರ ಬೆಳಗ್ಗೆ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಅಲ್ಲಂ ಪ್ರಶಾಂತ್ ಅವರು ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಧ್ಯಕ್ಷರು ಹಾಗೂ ಮುಖಂಡರುಗಳು, ಅಣ್ಣ ಬಸವಣ್ಣನವರು ಸರ್ವಾಧಿಕಾರ ಮತ್ತು ರಾಜವ್ಯವಸ್ಥೆಯ ನಡುವೆಯೇ ಪ್ರಜಾಪ್ರಭುತ್ವದ ಮೂಲ ತತ್ವಗಳನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ಚಿಂತಕರು ಎಂದು ಅಭಿಪ್ರಾಯಪಟ್ಟರು. ಅವರ ಉಪದೇಶಗಳನ್ನು ಅನುಸರಿಸಿದರೆ ಸಮಾಜವು ಸಮಾನತೆ, ಧರ್ಮನಿರಪೇಕ್ಷತೆ ಹಾಗೂ ಸುರಕ್ಷತೆಯ ದಾರಿಗೆ ಸಾಗಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್‌ನ ಹಿರಿಯ ನಾಯಕರಾದ ಕಲ್ಲುಕಂಭ ಪಂಪಾಪತಿ, ಎಲ್. ಮಾರೆಣ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುಮಯೂನ್ ಖಾನ್, ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಮಹಾಪೌರ ಪಿ. ಗಾದೆಪ್ಪ, ರಾಜ್ಯ ನಿರ್ದೇಶಕ ಜಿ.ಜೆ. ರವಿಕುಮಾರ್ ಸೇರಿದಂತೆ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಹಾಗೂ ವಿವಿಧ ಘಟಕಗಳ ಅಧ್ಯಕ್ಷರು, ಕಾರ್ಯಕಾರಿಣಿ ಸದಸ್ಯರು, ಪಾಲಿಕೆ ಸದಸ್ಯರು ಮತ್ತು ಮಹಿಳಾ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿ ಬಸವಣ್ಣನವರ ಸಂದೇಶಗಳನ್ನು ಸ್ಮರಿಸಿದರು.
ಕಾರ್ಯಕ್ರಮವು ಭಕ್ತಿ ಹಾಗೂ ಸಾಮಾಜಿಕ ಜಾಗೃತಿಯ ವಾತಾವರಣದಲ್ಲಿ ನೆರವೇರಿತು





