ಕಸಬ ತಾಲ್ಲೂಕಿನಲ್ಲಿ ಸಮಸ್ಯೆಗಳ ಸುರಿಮಳೆ: ಪರಿಹಾರಕ್ಕೆ ಜನರ ಮನವಿ

ಬೆಳಗಾಯಿತು ವಾರ್ತೆ | www.belagayithu.in
ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಕಸಬ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ತೀವ್ರ ಸಮಸ್ಯೆಗಳು ತಲೆದೋರಿದ್ದು, ಅವುಗಳನ್ನು ತಕ್ಷಣ ಬಗೆಹರಿಸಲು ಗ್ರಾಮಸ್ಥರು ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ರೈತ ಘಟಕದ ಅಧ್ಯಕ್ಷ ಜೋಗನಹಳ್ಳಿ ಗುರುಮೂರ್ತಿ ಮಾತನಾಡಿ, ಕುಡಿಯುವ ನೀರು, ರಸ್ತೆ ದುರಸ್ತಿ, ಕೊಳಚೆ ನಿರ್ವಹಣೆ, ರೈತರ ಸೌಲಭ್ಯ ಸೇರಿದಂತೆ ಅನೇಕ ಸಮಸ್ಯೆಗಳು ಜನರನ್ನು ಕಂಗೆಡಿಸುತ್ತಿವೆ. ಶಂಕರಬಂಡೆ ಗ್ರಾಮದಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗಿದೆ. ಗ್ರಾಮಾಭಿವೃದ್ಧಿ ಅಧಿಕಾರಿಯನ್ನು ಸಂಪರ್ಕಿಸಿದಾಗ ಸ್ಪಂದನೆ ಸಿಗುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಜನರು ನೀರು ಶುದ್ಧೀಕರಣ ಕೇಂದ್ರದಿಂದ ಒಂದು ಕೊಡಕ್ಕೆ ರೂ.7 ನೀಡಿ ನೀರು ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ಮುಖ್ಯ ರಸ್ತೆ ದುರಸ್ತಿಗಾಗಿ ಕಿತ್ತುಹಾಕಲಾಗಿದ್ದು, ಇದೀಗ ಗುಂಡಿಗಳಿಂದ ತುಂಬಿ ವಾಹನ ಸಂಚಾರಕ್ಕೆ ಅಸೌಕರ್ಯ ಉಂಟಾಗಿದೆ. ತುರ್ತಾಗಿ ಜಲ್ಲಿ-ಮರಳು ಸುರಿದು ಸಮತಟ್ಟಾಗಿಸಲು ಅವರು ಒತ್ತಾಯಿಸಿದರು.
ಇದೇ ರೀತಿ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಬೇಸಿಗೆ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಕಕ್ಕ ಬೇವಿನ ಹಳ್ಳಿಯ ಪಕ್ಕದಲ್ಲಿ ಬಳ್ಳಾರಿ ನಗರದ ಕೊಳಚೆ ನೀರು ಹರಿದು ದುರ್ಗಂಧ ಸೃಷ್ಟಿಯಾಗಿದ್ದು, ನೊಣ-ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಈ ನೀರನ್ನು ಮೂರು ಹಂತಗಳಲ್ಲಿ ಶುದ್ಧೀಕರಿಸಿ ಹೊರಬಿಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಲಿಂಗದೇವನಹಳ್ಳಿ, ವೈ.ಕಗ್ಗಲ್, ಕುಂಟನಾಳ, ಎತ್ತಿನಬೂದಿಹಾಳ್, ಬೊಬ್ಬಗುಂಟ, ಇಬ್ರಾಹೀಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೇ ಬೀದಿಗಳಲ್ಲಿ ಕೊಳಚೆ ನೀರು ಹರಿಯುತ್ತಿದೆ. ತಕ್ಷಣ ಚರಂಡಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಜನರು ಒತ್ತಾಯಿಸಿದ್ದಾರೆ.
ರೂಪನಗುಡಿ, ಅಸುಂಡಿ, ಹೊಸಮೋಕ ಪ್ರದೇಶಗಳ ಜೋಳ ಖರೀದಿ ಕೇಂದ್ರಗಳಲ್ಲಿ ಅವ್ಯವಸ್ಥೆ ತಾರಕಕ್ಕೇರಿದೆ. ರೈತರಿಗೆ ಕುಡಿಯುವ ನೀರು, ನೆರಳು, ವಿಶ್ರಾಂತಿ ಸೌಲಭ್ಯಗಳ ಕೊರತೆ ಕಂಡುಬರುತ್ತಿದೆ. ಹೊರಗಡೆಯಿಂದ ಬಂದ ರೈತರು 2-3 ದಿನಗಳ ಕಾಲ ಬಿಸಿಲಲ್ಲಿ ನಿಂತು ಸಂಕಷ್ಟ ಅನುಭವಿಸುತ್ತಿದ್ದಾರೆ. ಜೊತೆಗೆ, ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿದ್ದು, ರೈತರ ಜೋಳವನ್ನು ಸಣ್ಣ ಕಾರಣಗಳಿಗೆ ತಿರಸ್ಕರಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಚಳ್ಳಗುರ್ಕಿಯಿಂದ ವೈ.ಕಗ್ಗಲ್‌ಗೆ ಹೋಗುವ ರಸ್ತೆ ದುಸ್ಥಿತಿಯಲ್ಲಿದ್ದು, ತಕ್ಷಣ ದುರಸ್ತಿ ಮಾಡಲು ಒತ್ತಾಯಿಸಲಾಗಿದೆ. ತುಂಗಭದ್ರ ಬಲದಂಡೆ ನಾಲೆ ಹಳ್ಳಿಭಾಗದಲ್ಲಿ ತಡೆಗೋಡೆ ನಿರ್ಮಿಸಿ ಜನ-ಜಾನುವಾರುಗಳ ರಕ್ಷಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಇದೇ ವೇಳೆ, ಎರಡನೇ ಬೆಳೆಗೆ ನೀರು ಒದಗಿಸದೇ ಇರುವ ಹಿನ್ನೆಲೆಯಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು (ವಿಬಿ-ರಾಮ್‌ಜಿ) ತಕ್ಷಣ ಜಾರಿಗೊಳಿಸುವಂತೆ ಆಗ್ರಹಿಸಲಾಗಿದೆ.
ಈ ಎಲ್ಲಾ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಿ ಜನರ ಕಷ್ಟಗಳಿಗೆ ತೆರೆ ಎಳೆಯುವಂತೆ ಜೋಗನಹಳ್ಳಿ ಗುರುಮೂರ್ತಿ ಅವರು ಸಂಬಂಧಿತ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಿ ಸದಸ್ಯರಾದ ಶ್ರೀನಿವಾಸ್ ರೆಡ್ಡಿ, ನೀರೂಪ್, ಕಟ್ಟೆ ಬಸಪ್ಪ, ಜನಾರ್ಧನ್, ತಿಪ್ಪೇಸ್ವಾಮಿ, ನಾಗರೆಡ್ಡಿ ಸೇರಿದಂತೆ KRS ಪಕ್ಷದ ಮುಖಂಡರು ಉಪಸ್ಥಿತರಿದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles