ಬೆಳಗಾಯಿತು ವಾರ್ತೆ | www.belagayithu.in
ಬಳ್ಳಾರಿ: ಭಕ್ತಿಭಾವ ಮತ್ತು ಸಾಂಪ್ರದಾಯಿಕ ವೈಭವದ ನಡುವೆ ನಡೆಯಲಿರುವ ಹಜರತ್ ಸೈಯದ್ ಶಾ ಸದ್ರುದ್ದೀನ್ ಬಾಬಾ ಹುಸೇನಿ ಚಿಶ್ತಿ-ಉಲ್-ಕ್ವಾದ್ರಿ (ರಹ್ಮತುಲ್ಲಾಹಿ ಅಲೈಹಿ) ಅವರ ಉರ್ಸ್-ಎ-ಶರೀಫ್ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.
ನಗರದ ವಾರ್ಡ್ ನಂ.9ರ ಗೋನಾಲ್ ರಸ್ತೆಯ ದರ್ಗಾ ಕಾಂಪೌಂಡ್‌ನಲ್ಲಿ ಏಪ್ರಿಲ್ 17, 18 ಮತ್ತು 19ರಂದು ಮೂರು ದಿನಗಳ ಕಾಲ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ.
ಮೊದಲ ದಿನವಾದ ಏಪ್ರಿಲ್ 17ರಂದು ಸಂಜೆ 7:17ಕ್ಕೆ ಸಂದಲ್ ಮುಬಾರಕ್ ಹಾಗೂ ಸಂದಲ್ ಜೂಲೂಸ್ ಕಾರ್ಯಕ್ರಮಗಳು ಜರುಗಲಿವೆ. ಏಪ್ರಿಲ್ 18ರಂದು ರಾತ್ರಿ 8:30ಕ್ಕೆ ಮೆಹ್ಫಿಲ್-ಎ-ಸಾಮಾ ಹಾಗೂ ಹೈದರಾಬಾದ್‌ನಿಂದ ಆಗಮಿಸುವ ಕಲಾವಿದರಿಂದ ವಿಶೇಷ ಕವಾಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂತಿಮ ದಿನವಾದ ಏಪ್ರಿಲ್ 19ರಂದು ಬೆಳಗ್ಗೆ 7:30ಕ್ಕೆ ಜಿಯಾರತ್-ಎ-ಮುಖದ್ದಾಸ್, ಫತೇಹಾ ಹಾಗೂ ಲಾಂಗರ್ ಕಾರ್ಯಕ್ರಮಗಳು ನಡೆಯಲಿವೆ.
ದರ್ಗಾ ಟ್ರಸ್ಟ್ ಅಧ್ಯಕ್ಷರಾದ ಅಬ್ದುಲ್ ಸತ್ತಾರ್ ಸಾಹೇಬ್ ಅವರು ಮಾತನಾಡಿ, ಈ ಉರ್ಸ್ ಮಹೋತ್ಸವವು ಸುಮಾರು 280 ವರ್ಷಗಳ ಇತಿಹಾಸ ಹೊಂದಿದ್ದು, ಪೀಳಿಗೆಯಿಂದ ಪೀಳಿಗೆಗೆ ಮುಂದುವರಿದ ಪರಂಪರೆಯಾಗಿದೆ ಎಂದು ತಿಳಿಸಿದರು. 2016ರಲ್ಲಿ ಟ್ರಸ್ಟ್ ಸ್ಥಾಪನೆಯಾದ ಬಳಿಕ ದರ್ಗಾದ ಅಭಿವೃದ್ಧಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಹೇಳಿದರು.
ಈ ಬಾರಿ ಉರ್ಸ್‌ಗೆ ಸುಮಾರು 15 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಭಕ್ತರಿಗೆ ಊಟ, ಪಾರ್ಕಿಂಗ್ ಹಾಗೂ ರಾತ್ರಿ ವಾಸ್ತವ್ಯದ ಸಕಲ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಈ ದರ್ಗಾದ ವಿಶೇಷತೆ ಎಂದರೆ, ಇಲ್ಲಿ ಪ್ರಾರ್ಥನೆ ಸಲ್ಲಿಸಿದ ಅನೇಕ ಭಕ್ತರಿಗೆ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗಿದ್ದು, ಮಕ್ಕಳಿಲ್ಲದವರಿಗೆ ಸಂತಾನ ಲಾಭವಾಗಿರುವುದಾಗಿ ಭಕ್ತರು ನಂಬಿಕೆ ವ್ಯಕ್ತಪಡಿಸುತ್ತಿದ್ದಾರೆ.
ಜಾತಿ-ಧರ್ಮ ಭೇದವಿಲ್ಲದೆ ಎಲ್ಲರೂ ಒಂದಾಗಿ ಸೇರಿ ಈ ಉರ್ಸ್ ಮಹೋತ್ಸವವನ್ನು ಆಚರಿಸುತ್ತಿರುವುದು ವಿಶೇಷವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಆಶೀರ್ವಾದ ಪಡೆಯುವಂತೆ ದರ್ಗಾ ಟ್ರಸ್ಟ್ ಮನವಿ ಮಾಡಿದೆ.






