ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ಕರ್ನಾಟಕ ರಾಜ್ಯ ಸಿಂಧೋಳ ಹಾಗೂ ಅಲೆಮಾರಿ ಸಮುದಾಯದ ಪರವಾಗಿ ದೀರ್ಘಕಾಲ ಹೋರಾಟ ನಡೆಸಿದ್ದ ಚಿನ್ನ ಯಲ್ಲಪ್ಪ ಅವರ ನಿಧನ ಹಿನ್ನೆಲೆ ಸಮುದಾಯದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. ಸಮಾಜದ ಹಕ್ಕುಗಳು, ಮೀಸಲಾತಿ ಹಾಗೂ ಅಲೆಮಾರಿ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸಿದ್ದ ಅವರ ಕುಟುಂಬಕ್ಕೆ ವಿವಿಧ ಮುಖಂಡರು ಸಾಂತ್ವನ ಸೂಚಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಸಾಮಾಜಿಕ ನ್ಯಾಯ ಸಮಿತಿ ರಾಜ್ಯ ಉಪಾಧ್ಯಕ್ಷ ವೈ. ಶಿವಕುಮಾರ್ ಅವರು ಚಿನ್ನ ಯಲ್ಲಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದರು. ಇದೇ ವೇಳೆ ಕುಟುಂಬಕ್ಕೆ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದರು.
ಚಿನ್ನ ಯಲ್ಲಪ್ಪ ಅವರಿಗೆ ಮೂವರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದು, ಕುಟುಂಬದ ಪರಿಸ್ಥಿತಿ ಕುರಿತು ಮಾಹಿತಿ ಪಡೆದ ವೈ. ಶಿವಕುಮಾರ್ ಅವರು ಮಕ್ಕಳ ಶಿಕ್ಷಣ ಯಾವುದೇ ಕಾರಣಕ್ಕೂ ನಿಲ್ಲಬಾರದು ಎಂದು ಹೇಳಿದರು. ಮುಂದಿನ ದಿನಗಳಲ್ಲಿಯೂ ಶಿಕ್ಷಣ ಸೇರಿದಂತೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಅಲೆಮಾರಿ ಸಮುದಾಯದ ಹಕ್ಕುಗಳು, ಮೀಸಲಾತಿ, ಶಿಕ್ಷಣ ಸೌಲಭ್ಯ ಹಾಗೂ ಉದ್ಯೋಗ ಅವಕಾಶಗಳಿಗಾಗಿ ಹಲವು ವರ್ಷಗಳಿಂದ ವೈ. ಶಿವಕುಮಾರ್ ಅವರು ನಿರಂತರ ಹೋರಾಟ ನಡೆಸುತ್ತಿದ್ದು, ಸಮುದಾಯದ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ಪ್ರಸ್ತಾಪಿಸಿ ನ್ಯಾಯ ದೊರಕಿಸಿಕೊಡಲು ಶ್ರಮಿಸುತ್ತಿದ್ದಾರೆ ಎಂದು ಮುಖಂಡರು ತಿಳಿಸಿದರು.
“ವೈ. ಶಿವಕುಮಾರ್ ಅವರು ಕೇವಲ ರಾಜಕೀಯ ನಾಯಕ ಮಾತ್ರವಲ್ಲ, ಅಲೆಮಾರಿ ಸಮುದಾಯದ ನೋವು-ನಲಿವುಗಳಿಗೆ ಸ್ಪಂದಿಸುವ ಹೃದಯವಂತ ವ್ಯಕ್ತಿ. ಸಮುದಾಯದ ಜನರ ಶಿಕ್ಷಣ, ಉದ್ಯೋಗ ಹಾಗೂ ಹಕ್ಕುಗಳಿಗಾಗಿ ಸದಾ ಹೋರಾಟ ನಡೆಸುತ್ತಿದ್ದಾರೆ,” ಎಂದು ಸಮುದಾಯದ ಮುಖಂಡರು ಪ್ರಶಂಸಿಸಿದರು.
ಈ ಸಂದರ್ಭದಲ್ಲಿ ಎಚ್‌ಪಿ ಶಿಕಾರಿ, ರಾಮು, ಗಾಳಿ ಕುಮಾರ್, ಗಲ್ಲಪ್ಪ, ರಾಹುಲ್ ನಾಗಪ್ಪ, ವೆಂಕಟೇಶ್ ಸೇರಿದಂತೆ ಸಮುದಾಯದ ಮುಖಂಡರು, ಕಾರ್ಯಕರ್ತರು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದು, ಚಿನ್ನ ಯಲ್ಲಪ್ಪ ಅವರ ಸಮಾಜಸೇವೆಯನ್ನು ಸ್ಮರಿಸಿದರು.





