ಹರಪನಹಳ್ಳಿ: ತಾಲೂಕಿನ 23 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ರೈತರಿಗೆ ಬ್ಯಾಂಕಿನಿಂದ ಸಿಗುವ ಸೌಲಭ್ಯಗಳನ್ನು ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ ಎಂದು ಬಿಡಿಸಿಸಿ ಬ್ಯಾಂಕ್‍ನ ನೂತನ ನಿರ್ದೆಶಕ ಅರಸಿಕೇರಿಯ ವೈ.ಡಿ.ಅಣ್ಣಪ್ಪ ತಿಳಿಸಿದರು.
ಪಟ್ಟಣದ ವಾಲ್ಮೀಕಿ ನಗರದ ಹಾಲಸ್ವಾಮಿ ಮಠದಲ್ಲಿ ಬಿಡಿಸಿಸಿ ಬ್ಯಾಂಕಿಗೆ ನೂತನವಾಗಿ ನಿರ್ದೇಶಕರಾಗಿ ಆಯ್ಕೆಯಾದ ವೈ.ಡಿ.ಅಣ್ಣಪ್ಪ ಅವರಿಗೆ ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಬರಗಾಲ ಇದ್ದು, ರೈತರು ಸಂಕಷ್ಟಕ್ಕೀಡಾಗಿದ್ದಾರೆ, ಹಾಗಾಗಿ ತಾಲೂಕಿನ 23 ಪ್ರಾಥಮಿಕ ಕೃಷಿ ಪತ್ತಿನ ಸಂಘಗಳಲ್ಲಿ ರೈತರಿಗೆ ನೆರವಾಗಲು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪ್ರಮಾಣಿಕವಾಗಿ ಕೊಡಿಸಲು ನನ್ನ ಕೈಲಾದ ಸಹಾಯ ಮಾಡುತ್ತೇನೆ ಎಂದರು.
ಗ್ರಾಮ, ತಾಲೂಕು ಮಟ್ಟದ ಸಹಕಾರ ಕ್ಷೇತ್ರದಲ್ಲಿ ಈಗಾಗಲೇ ಕೆಲಸ ಮಾಡಿದ್ದೆ, ಇದೀಗ ಜಿಲ್ಲಾ ಮಟ್ಟದ ಸಹಕಾರ ಬ್ಯಾಂಕಿಗೆ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದ ಅವರು ನನಗೆ ಈ ಬಾರಿ 13 ರಿಂದ 14 ಮತಗಳು ಬರುವ ನಿರೀಕ್ಷೆ ಇತ್ತು, ಆದರೆ ನಿರೀಕ್ಷೆಗಿಂತ ಕಡಿಮೆ ಮತಗಳು ಬಂದಿವೆ ಈ ಗೆಲುವು ನನಗೆ ಸಂತಸ ತಂದಿದೆ ಮುಂದೆ ನಾನು ಬಿಡಿಸಿಸಿ ಬ್ಯಾಂಕಿನ ಅದ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು, ಅದ್ಯಕ್ಷನಾಗಲು ಪ್ರಯತ್ನಿಸುವೆ ಎಂದರು.
ರಾಜಕೀಯದಲ್ಲಿ ಒಂದೊಂದೆ ಮೆಟ್ಟಿಲು ಹತ್ತುತ್ತಿರುವುದಾಗಿ ಹೇಳಿದ ಅವರು ಮುಂದೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದರೂ ಅಚ್ಚರಿಯಿಲ್ಲ ಎಂದು ಅವರು ತಿಳಿಸಿದರು.
ಬಿಡಿಸಿಸಿ ಬ್ಯಾಂಕಿಗೆ ನೂತನವಾಗಿ ನಿರ್ದೇಶಕರಾಗಿ ಆಯ್ಕೆಯಾದ ಅಣ್ಣಪ್ಪ ಅವರನ್ನು ಅವರ ಅಭಿಮಾನಿಗಳು ಸ್ವಾಗ್ರಾಮ ಅರಸಿಕೇರಿಯಲ್ಲಿ ಡಿಜೆ ಹಾಡಿನೊಂದಿಗೆ ಅದ್ದೂರಿಯಾಗಿ ಸ್ವಾಗತ ಮಾಡಿಕೊಂಡರು. ಹಾಲಸ್ವಾಮಿ ಮಠದ ವೀರಯ್ಯ ಹಾಲಸ್ವಾಮಿಗಳು ಸೇರಿದಂತೆ ವಿವಿಧ ಮುಖಂಡರು ಶಾಲು ಹೊದಿಸಿ ಬಿಡಿಸಿಸಿ ಬ್ಯಾಂಕಿನ ನಿರ್ದೆಶಕರಾಗಿ ಆಯ್ಕೆಯಾದ ವೈ.ಅಣ್ಣಪ್ಪ ನವರನ್ನು ಸನ್ಮಾನಿಸಿ ಅಭಿನಂದಿಸಿದರು.
ಪುರಸಭಾ ಮಾಜಿ ಅಧ್ಯಕ್ಷ ಹೆಚ್.ಕೆ.ಹಾಲೇಶ್, ಹಾಲಿ ಸದಸ್ಯ ದ್ಯಾಮಜ್ಜಿ ರೊಕ್ಕಪ್ಪ, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಚಿಗಟೇರಿ ಜಂಬಣ್ಣ, ಪಿಕಾರ್ಡ ಬ್ಯಾಂಕ್ ಮಾಜಿ ಅದ್ಯಕ್ಷ ಮುತ್ತಿಗೆ ಜಂಬಣ್ಣ, ನಿರ್ದೆಶಕ ಪಿ.ಬಿ.ಗೌಡ, ಟಿಎಪಿಸಿಎಂಎಸ್ ನಿರ್ದೆಶಕ ಗಿಡ್ಡಳ್ಳಿ ನಾಗರಾಜ, ನಿಚ್ಚವನಹಳ್ಳಿ ಗ್ರಾ.ಪಂ ಅಧ್ಯಕ್ಷ ಕೆ. ಆನಂದ, ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಉಚ್ಚೆಂಗೆಪ್ಪ,ಕೆ ಮುಖಂಡರಾದ ಪ್ರಶಾಂತ ಪಾಟೀಲ್, ಬಾಣದ ಅಂಜಿನಪ್ಪ, ಕಮ್ಮಾರ ಹಾಲಪ್ಪ, ಚಿಕ್ಕೇರಿ ವೆಂಕಪ್ಪ, ಕಿಚ್ಚಯುವ ಸೇನೆ ಜಿಲ್ಲಾ ಅಧ್ಯಕ್ಷ ಹಾದಿಮನಿ ಸಂತೋಷ, ದ್ಯಾಮಜ್ಜಿ ಹನುಮಂತಪ್ಪ, ಕೆಂಗಳ್ಳಿ ಪ್ರಕಾಶ, ದ್ಯಾಮಜ್ಜಿ ದಂಡೆಪ್ಪ, ಪಿ.ಅರುಣ, ನಿಟ್ಟೂರು ದೊಡ್ಡಹಾಲಪ್ಪ, ಎಂ.ಉಚ್ಚೆಂಗೆಪ್ಪ, ಅಜ್ಜಯ್ಯ, ಚಿಕ್ಕೇರಿ ಪಾಲಕ್ಷ ಸೇರಿದಂತೆ ಇತರರು ಹಾಜರಿದ್ದರು.