ಬೆಳಗಾಯಿತು ವಾರ್ತೆ
ಬಳ್ಳಾರಿ: ನೀರು ಸಂಗ್ರಹಾಗಾರ ಕೆರೆಗಳಲ್ಲಿ ಅಗತ್ಯಕ್ಕೆ ಬೇಕಾಗುವಷ್ಟು ನೀರಿದ್ದು, ಬೇಸಿಗೆಯಲ್ಲಿ ಬಳ್ಳಾರಿ ನಗರಕ್ಕೆ ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಶನಿವಾರ ಸಂಜೆ ನಗರದ ಹೊರ ವಲಯದಲ್ಲಿರುವ ಅಲ್ಲಿಪುರ ಕೆರೆಗೆ ಭೇಟಿ ನೀಡಿ, ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಕಾಲುವೆ ರಿಪೇರಿ, ಕ್ರಸ್ಟ್ ಗೇಟ್ ಅಳವಡಿಕೆ ಕಾಮಗಾರಿ ನಡೆಯುತ್ತಿದೆ, ಕುಡಿಯುವ ನೀರಿಗೆ ಬೇಕಾಗುವಷ್ಟು ಸಂಗ್ರಹ ಜಲಾಶಯದಲ್ಲಿ ಇದೆ, ನಮ್ಮ ಪಾಲಿನ 1.3 ಟಿಎಂಸಿ ನೀರನ್ನು ಮುಂದಿನ ತಿಂಗಳ ಒಳಗೆ ಪಡೆಯಲಾಗುವುದು ಎಂದರು.
ಅಲ್ಲಿಪುರ ಕೆರೆಯ ಬಾಂದು ಹಾಗೂ ಸುತ್ತಮುತ್ತ ಪ್ರದೇಶದ ಅಭಿವೃದ್ಧಿಗೆ ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು ಎಂದ ಅವರು 1200 ಕೋಟಿ ರೂ.ಗಳ ನಿರಂತರ ಕುಡಿಯುವ ನೀರಿನ ಯೋಜನೆಯನ್ನು ಪ್ರತ್ಯೇಕವಾಗಿ ಮಾಡಲಾಗುತ್ತಿದ್ದು, ಕೊಳಗಲ್ ಬಳಿ ಬೃಹತ್ ಕೆರೆ ನಿರ್ಮಿಸಲಾಗುವುದು ಎಂದರು.
ಒಳ ಚರಂಡಿಗೆ 380 ಕೋಟಿ: ಬಳ್ಳಾರಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಒಳ ಚರಂಡಿ ನಿರ್ಮಾಣಕ್ಕಾಗಿ 380 ಕೋಟಿ ರೂ.ಗಳನ್ನು ನೀಡುವಂತೆ ಸಿಎಂ ಅವರಿಗೆ ಮನವಿ ಮಾಡಲಾಗಿತ್ತು, ಬಜೆಟ್ಟಿನಲ್ಲಿ ಘೋಷಣೆ ಆಗಿಲ್ಲ, ಆದರೆ ಹೆಚ್ಚುವರಿ ಯೋಜನೆಯಲ್ಲಿ ಸೇರಿಸಲು ಮಂಜೂರಾತಿ ಸಿಕ್ಕಿದೆ ಎಂದು ಹೇಳಿದರು.
ಅಕ್ರಮ ಯೂರಿಯಾ ಮಾರಾಟದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕ ನಾರಾ ಭರತ್ ರೆಡ್ಡಿ, ಅಕ್ರಮ ಯುರಿಯಾ ಮಾತ್ರವಲ್ಲದೇ ಅಕ್ರಮ ಜೋಳ ಸಂಗ್ರಹ ಮತ್ತು ಮಾರಾಟ ಜಾಲದ ಬಗ್ಗೆಯೂ ಗಂಭೀರ ತನಿಖೆ ನಡೆಸಲಾಗುವುದು ಎಂದರು.
ಈ ಸಂದರ್ಭ ಮೇಯರ್ ಪಿ.ಗಾದೆಪ್ಪ, ಮಾಜಿ ಮೇಯರ್ ಎಂ.ರಾಜೇಶ್ವರಿ, ಪಾಲಿಕೆಯ ಸದಸ್ಯರಾದ ಕುಬೇರಾ, ಪೇರಂ ವಿವೇಕ್, ಪಾಲಿಕೆಯ ಆಯುಕ್ತ ಮಂಜುನಾಥ, ಕಾಂಗ್ರೆಸ್ ಮುಖಂಡರಾದ ಎಂ.ಸುಬ್ಬರಾಯುಡು, ಪರಶುರಾಮುಡು, ಹೊನ್ನೂರಪ್ಪ ಶೇಖರ್, ಪಾಲಿಕೆಯ ಅಧಿಕಾರಿಗಳು ಹಾಜರಿದ್ದರು.





