ಬಳ್ಳಾರಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದ ವಿಭಾಗೀಯ ಭದ್ರತಾ ಇನ್ಸ್ ಪೆಕ್ಟರ್ ಹುಸೇನಪ್ಪ ಅವರನ್ನು ಭಾನುವಾರ ರಾತ್ರಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ ಭಂಡಾರು ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಕಚೇರಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಹುಸೇನಪ್ಪ ರಾತ್ರಿ 8-30ರ ಸುಮಾರಿಗೆ ಬೀದರ್‌ಗೆ ಹೊರಡುತ್ತಿದ್ದ ವೇಳೆ ದುಷ್ಕರ್ಮಿಗಳು ಅಡ್ಡಗಟ್ಟಿದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೇರೆಯಾಗಿದೆ. ವಿಡಿಯೋ ಬ್ಲರ್ ಇರುವುದರಿಂದ ಅವರ ಮುಖ ಗುರುತಿಸಲು ಸಾಧ್ಯವಾಗಿಲ್ಲ ಎಂದರು.
ಬೀದರ್‌ನಲ್ಲಿ ನಡೆಯುತ್ತಿರುವ ಚಾಲಕರ ನೇಮಕಾತಿ ಪರೀಕ್ಷೆಗೆ ಅವರನ್ನು ನಿಯೋಜಿಸಲಾಗಿತ್ತು. ಮನೆಯಿಂದ ಕೂಗಳತೆ ದೂರದಲ್ಲಿಯೇ ಹತ್ಯೆ ನಡೆದಿದೆ. ಹುಸೇನಪ್ಪ ಕಿರುಚಾಟಕ್ಕೆ ಮನೆಯವರು ಹೊರಗೆ ಬಂದಿದ್ದಾರೆ. ಆ ವೇಳೆಗೆ ಆರೋಪಿಗಳು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ.
ಹುಸೇನಪ್ಪ ಇಬ್ಬರು ಗಂಡು ಮಕ್ಕಳು, ಓರ್ವ ಪುತ್ರಿಯನ್ನು ಹೊಂದಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.