ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ಪೊಲಾ ಮೂವೀಸ್ ಅಡಿಯಲ್ಲಿ ನಿರ್ಮಾಣವಾಗಿರುವ ‘ಶಿಖಂಡಿ’ ಕನ್ನಡ ಚಲನಚಿತ್ರವು ಮೇ 15ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ನಿರ್ದೇಶಕ ಗುರುಮೂರ್ತಿ ಅವರು ನಿರ್ದೇಶಿಸಿದ್ದು, ಇದು ಅವರ ಎರಡನೇ ಸಿನಿಮಾ ಆಗಿದೆ. ಇವರ ಮೊದಲ ಚಿತ್ರ ‘ಮಾರಕಾಸ್ತ್ರ’ವಾಗಿತ್ತು.
ಚಿತ್ರದ ನಿರ್ಮಾಪಕರಾದ ಹೊಟೇಲ್ ಉದ್ಯಮಿ ಪೊಲಾ ಪ್ರವೀಣ್ ಅವರು ಮಾತನಾಡಿ, “ಇದು ಬಳ್ಳಾರಿಯ ಚಿತ್ರವಾಗಿದ್ದು, ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ಬಳ್ಳಾರಿ ಜನರಿಗೆ ಉತ್ತಮ ಮನರಂಜನೆ ನೀಡುವುದು ನಮ್ಮ ಉದ್ದೇಶ,” ಎಂದು ತಿಳಿಸಿದ್ದಾರೆ.
ಚಿತ್ರದಲ್ಲಿ ನಟ ಯುವರಾಜ್ ಗೌಡ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದು, ನಟಿ ಖ್ಯಾತಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸಹ ನಿರ್ದೇಶಕರಾಗಿ ಉಮೇಶ್ ಕಾರ್ಯನಿರ್ವಹಿಸಿದ್ದು, ಕಳನಾಯಕನ ಪಾತ್ರದಲ್ಲಿ ದೀಪಾ ಶೇಟ್ಟಿ ಅಭಿನಯಿಸಿದ್ದಾರೆ. ಡಿಒಪಿಯಾಗಿ ಸ್ವಾಮಿ ಕೆಲಸ ಮಾಡಿದ್ದು, ಚಾಂದನಿ ಸೇರಿದಂತೆ ಅನೇಕರು ತಾಂತ್ರಿಕ ಬಳಗದಲ್ಲಿ ಭಾಗಿಯಾಗಿದ್ದಾರೆ.
ಈ ಚಿತ್ರವನ್ನು, ಬಳ್ಳಾರಿಯ ವಿವಿಧ ಭಾಗಗಳಲ್ಲಿ ಚಿತ್ರಿಕರಣಗೊಂಡಿದ್ದು, ಜೊತೆಗೆ ಬೆಂಗಳೂರು, ಮೈಸೂರು, ಮಾಗಡಿ, ಚನ್ನಪಟ್ಟಣ ಮತ್ತು ಬಿಡದಿ ಪ್ರದೇಶಗಳಲ್ಲಿ ಚಿತ್ರೀಕರಣ ನಡೆದಿದೆ. ಸಾಹಿತಿ ಕಿನ್ನಾಳ ರಾಜ್ ಅವರು ಕಥೆ ರಚಿಸಿದ್ದು, ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರವಾಗಿದೆ.
ಚಿತ್ರದಲ್ಲಿ ಬಳ್ಳಾರಿಯ ಸುಮಾರು 22 ಕಲಾವಿದರಿಗೆ ಅವಕಾಶ ನೀಡಲಾಗಿದೆ. ಮೊದಲ ಹಂತದಲ್ಲಿ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಯೋಜನೆ ಇದ್ದು, ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕರು ತಯಾರಿ ನಡೆಸಿದ್ದಾರೆ.
ಸ್ಥಳೀಯ ಪ್ರತಿಭೆಗಳನ್ನು ಉತ್ತೇಜಿಸುವ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ನಿರೀಕ್ಷಿಸಲಾಗಿದೆ.





