ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ಗಡಿ ಪ್ರದೇಶವಾದ ಬಳ್ಳಾರಿಯಲ್ಲಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ಜಾಗೃತಿಯನ್ನು ಬೆಳೆಸುವ ಉದ್ದೇಶದಿಂದ ಸಂಗಂ ಟ್ರಸ್ಟ್ (ರಿ) ವತಿಯಿಂದ ಮೇ 9 ಮತ್ತು 10ರಂದು ನಗರದ ಜ್ಞಾನಾಮೃತ ಕಾಲೇಜಿನಲ್ಲಿ ಎರಡು ದಿನಗಳ ಅಂತರರಾಜ್ಯ ಮಟ್ಟದ ಸಾಹಿತ್ಯ ವಿಚಾರ ಸಂಕಿರಣ ಹಾಗೂ ದ್ರಾವಿಡ ಭಾಷಾ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಸಂಗಂ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಡಾ. ಕೆ. ಶಿವಲಿಂಗಪ್ಪ ಹಂದಿಹಾಳು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಗಂ ಟ್ರಸ್ಟ್ ಲಾಭದಾಯಕವಲ್ಲದ ಸಾಹಿತ್ಯ ವೇದಿಕೆಯಾಗಿದ್ದು, ಬಳ್ಳಾರಿಗೆ ವಿಶ್ವಮಟ್ಟದ ಸಾಹಿತ್ಯ ಚಹರೆಯನ್ನು ನೀಡುವ ಉದ್ದೇಶದಿಂದ 2022ರಲ್ಲಿ ವಿಶ್ವಕವಿ ಸಮ್ಮೇಳನ ಆಯೋಜಿಸಲಾಗಿತ್ತು ಎಂದರು. ಸಮ್ಮೇಳನದಲ್ಲಿ 17 ದೇಶಗಳು ಹಾಗೂ ಭಾರತದ 25 ರಾಜ್ಯಗಳ ಕವಿಗಳು ಭಾಗವಹಿಸಿದ್ದರು ಎಂದು ಹೇಳಿದರು.
ಸಮ್ಮೇಳನದ ನಂತರ ಪ್ರತಿವರ್ಷ “ಸಂಗಂ ಸಾಹಿತ್ಯ ಪುರಸ್ಕಾರ” ಕಾರ್ಯಕ್ರಮದೊಂದಿಗೆ ಎರಡು ದಿನಗಳ ಅಂತರರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಆಯೋಜಿಸಲಾಗುತ್ತಿದೆ. ಸಾಹಿತ್ಯದ ವಿವಿಧ ಪ್ರಕಾರಗಳ ಕೃತಿಗಳಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸ ಲಾಗುತ್ತಿದೆ ಎಂದು ತಿಳಿಸಿದರು.
ಮೇ 9ರಂದು ನಡೆಯುವ ಉದ್ಘಾಟನಾ ಸಮಾರಂಭವನ್ನು ಓ.ಎಲ್. ನಾಗಭೂಷಣ ಸ್ವಾಮಿ ಉದ್ಘಾಟಿಸಲಿದ್ದು, ಡಾ. ಅರವಿಂದ ಪಟೇಲ್ ಅಧ್ಯಕ್ಷತೆ ವಹಿಸಲಿದ್ದಾರೆ. ನ್ಯಾಷನಲ್ ಬುಕ್ ಟ್ರಸ್ಟ್‌ನ ಡಾ. ಪತ್ತಿಪಾಕ ಮೋಹನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾವ್ಯ ಸಂವಾದದಲ್ಲಿ ಚಿದಾನಂದ ಸಾಲಿ, ರವಿಕುಮಾರ್ ಟೆಲೆಕ್ಸ್, ಭುವನಾ ಹಿರೇಮಠ, ನಾಗಣ್ಣ ಕಿಲಾರಿ ಹಾಗೂ ತೆಲುಗು ಸಾಹಿತಿಗಳಾದ ತಗುಳ ಗೋಪಾಲ, ಕಲ್ಯಾಣ ಕುಂಜು ಮತ್ತು ಬಾಲಸುಧಾಕರ ಮೌಳಿ ಭಾಗವಹಿಸಲಿದ್ದಾರೆ. ಪ್ರಶಸ್ತಿ ಹಂತದ ಐದು ಮಂದಿ ಕವಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದ್ದು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅಮರೇಶ್ ನುಗಡೋಣಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ವೈ.ಸಿ. ಯೋಗಾನಂದ ರೆಡ್ಡಿ ವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಡಾ. ವೈ.ಸಿ. ಯೋಗಾನಂದ ರೆಡ್ಡಿ, ಬಸವರಾಜ್, ವೀರೇಶ್, ದಷ್ಟಗಿರಿ, ನಾಗರಾಜ್ ಬಸರಕೋಡು ಸೇರಿದಂತೆ ಹಲವರು ಉಪಸ್ಥಿತರಿದ್ದರು.





