ಬೆಳಗಾಯಿತು ವಾರ್ತೆ| Www.belagayithu.in
ಬಳ್ಳಾರಿ: ಹಳೆಯ ಮನೆ ಕೆಡವುವಾಗ ಸಿಕ್ಕ ಅಸಲಿ ಚಿನ್ನದ ನಾಣ್ಯಗಳೆಂದು ನಂಬಿಸಿ, ನಿವೃತ್ತ ಯೋಧನೊಬ್ಬರಿಗೆ ನಕಲಿ ಚಿನ್ನದ ನಾಣ್ಯಗಳನ್ನು ನೀಡಿ 7 ಲಕ್ಷ ವಂಚಿಸಿರುವ ಘಟನೆ ಬಳ್ಳಾರಿ ಜಿಲ್ಲೆಯ ಹಾಲಕುಂದಿ ಗ್ರಾಮದ ಫೈರಿಂಗ್ ರೇಂಜ್ ಸಮೀಪ ನಡೆದಿದೆ.
ಬೆಂಗಳೂರಿನ ಹೊಸ ತಿಪ್ಪಸಂದ್ರ ನಿವಾಸಿ, ನಿವೃತ್ತ ಯೋಧ ಶಿವಯ್ಯ ವಂಚನೆಗೊಳಗಾದವರು. ಈ ಸಂಬಂಧ ಕಲಬುರಗಿಯ ರಮೇಶ್ (32) ಹಾಗೂ ಮತ್ತೊಬ್ಬ ಅಪರಿಚಿತ ವ್ಯಕ್ತಿಯ ವಿರುದ್ಧ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ರಮೇಶ್ ಮೊಬೈಲ್ ಮೂಲಕ ಸಂಪರ್ಕಿಸಿ, ತನ್ನ ಅಜ್ಜನ ಜಮೀನಿನಲ್ಲಿ ಸುಮಾರು 1 ಕೆ.ಜಿ. ಚಿನ್ನದ ನಾಣ್ಯಗಳಿರುವ ಬಿಂದಿಗೆ ಸಿಕ್ಕಿದೆ ಎಂದು ನಂಬಿಸಿದ್ದ. ವಿಶ್ವಾಸ ಮೂಡಿಸಲು ಒಂದು ಅಸಲಿ ಚಿನ್ನದ ನಾಣ್ಯವನ್ನು ನೀಡಿದ್ದ. ಅದನ್ನು ಶಿವಯ್ಯ ಚಿನ್ನದ ಅಂಗಡಿಯಲ್ಲಿ ಪರೀಕ್ಷಿಸಿದಾಗ ಅದು ಅಸಲಿ ಚಿನ್ನವೆಂದು ದೃಢಪಟ್ಟಿತ್ತು.
ಇದಾದ ಬಳಿಕ 50 ಲಕ್ಷಕ್ಕೆ ವ್ಯವಹಾರ ನಿಗದಿಯಾಗಿದ್ದು, ಜೂನ್ 19ರಂದು ಮೊದಲ ಕಂತಾಗಿ 7 ಲಕ್ಷ ನಗದು ಪಡೆದ ಆರೋಪಿಗಳು ನಕಲಿ ಚಿನ್ನದ ನಾಣ್ಯಗಳನ್ನು ನೀಡಿ ಪರಾರಿಯಾಗಿದ್ದಾರೆ.
ವಂಚನೆ ನಡೆದಿರುವುದು ತಡವಾಗಿ ಗೊತ್ತಾದ ಹಿನ್ನೆಲೆಯಲ್ಲಿ ಶಿವಯ್ಯ ಅವರು ಜುಲೈ 15ರಂದು ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಬಳ್ಳಾರಿ ಗ್ರಾಮೀಣ ಪೊಲೀಸರು ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.





