ಬೆಳಗಾಯಿತು ವಾರ್ತೆ Www.belagayithu.in
ಬಳ್ಳಾರಿ: ಗ್ರಾಮೀಣ ವಿಧಾನಸಭಾ ಕ್ಷೇತ್ರದ ಮೀನಳ್ಳಿ ಗ್ರಾಮದ ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಅವರ ನಿವಾಸಕ್ಕೆ, ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ ಐಆರ್) ಪ್ರಕ್ರಿಯೆ ಹಿನ್ನೆಲೆ ಬಿಎಲ್ ಒ ಅಧಿಕಾರಿಗಳು ಶನಿವಾರ ಭೇಟಿ ನೀಡಿ ನಮೂನೆಗಳನ್ನು ವಿತರಿಸಿದರು.
ಬಿಎಲ್ ಒ ಅಧಿಕಾರಿ ಶ್ರೀಲತಾ, ಸಹಾಯಕರಾದ ನೀಲಮ್ಮ ಅವರಿಗೆ, ಗಣತಿ ನಮೂನೆಗಳನ್ನು ಭರ್ತಿ ಮಾಡಿ, ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಅವರು, ಅಧಿಕಾರಿಗಳಿಗೆ ಮರಳಿ ಹಸ್ತಾಂತರಿಸಿದರು. ಜೊತೆಗೆ ಕುಟುಂಬದ ಸದಸ್ಯರ ಮಾಹಿತಿಗಳನ್ನು ಪಡೆದ ಅಧಿಕಾರಿಗಳು, ಪ್ರಕ್ರಿಯೆ ಪೂರ್ಣಗೊಳಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಅವರು ಮಾತನಾಡಿ, ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ ಐಆರ್) ಪ್ರಕ್ರಿಯೆ ರಾಜ್ಯ ಸೇರಿ ದೇಶಾದ್ಯಂತ ಪ್ರಾರಂಭಗೊಂಡಿದ್ದು, ಜು.29ರ ವರೆಗೆ ನಡೆಯಲಿದೆ. ಬೂತ್ ಮಟ್ಟದ ಅಧಿಕಾರಿಗಳು ಈಗಾಗಲೇ ಮನೆ ಮನೆಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸಲು ಮುಂದಾಗಿದ್ದಾರೆ, ಪ್ರತಿಯೊಬ್ಬ ಅರ್ಹ ಮತದಾರರು ನಮೂನೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡಿ ಮರಳಿ ಅಧಿಕಾರಿಗಳಿಗೆ ಹಸ್ತಾಂತರಿಸಿ ಈ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು. ಬಳ್ಳಾರಿಯ ಕೌಲ್ ಬಜಾರ್ ಪ್ರದೇಶದಲ್ಲಿ ಸುಮಾರು ಜನ ಬಾಂಗ್ಲಾ ದೇಶದವರು ವಾಸವಾಗಿದ್ದು, ಈ ಕುರಿತು ಅಧಿಕಾರಿಗಳು ಹೆಚ್ಚು ಗಮನಹರಿಸಿ ಕೆಲಸ ಪೂರ್ಣಗೊಳಿಸಬೇಕು. ಈ ಕುರಿತು ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಸಾಕಷ್ಟು ಬಾರಿ ಪ್ರಸ್ತಾಪಿಸಿ ಜಿಲ್ಲಾಡಳಿತದ ಗಮನಸೆಳೆದಿದ್ದಾರೆ. ಯಾವುದೇ ಕಾರಣಕ್ಕೂ ಅನರ್ಹರು ಸೇರ್ಪಡೆಯಾಗಬಾರದು, ಇದೊಂದು ಪ್ರಜಾಪ್ರಭುತ್ವದ ಹಬ್ಬವಿದ್ದಂತೆ, ಈ ಅಭಿಯಾನದಲ್ಲಿ ಪ್ರತಿಯೊಬ್ಬ ಅರ್ಹ ಮತದಾರರು ಭಾಗವಹಿಸಿ ಯಶಸ್ವಿಗೊಳಿಸಬೇಕು. 2022ರ ಮತದಾರರ ಪಟ್ಟಿಯಲ್ಲಿ ಮ್ಯಾಪಿಂಗ್ ಆಗದೇ ಇರುವವರ ಹೆಸರು, ಮತದಾರರ ಪಟ್ಟಿಯಲ್ಲಿ ಕೈತಪ್ಪುವ ಸಾಧ್ಯತೆ ಇರಲಿದೆ. ಈ ಕುರಿತು ಯಾವುದೇ ಸoಶಯಗಳಿದ್ದಲ್ಲಿ ವ್ಯಾಪ್ತಿಯ ಬಿಎಲ್ ಒ ಅಧಿಕಾರಿಗಳು ಅಥವಾ ತಹಸೀಲ್ದಾರ್ ಕಚೇರಿಗೆ ಸಂಪರ್ಕಿಸಬಹುದು ಎಂದರು. ಪ್ರಕ್ರಿಯೆಗೆ ತೆರಳುವ ಅಧಿಕಾರಿಗಳು ಗ್ರಾಮೀಣ ಭಾಗದ ಜನರಿಗೆ ಈ ಕುರಿತು ಹೆಚ್ಚು ಪ್ರಚಾರ ಮಾಡಬೇಕು, ಮಾಹಿತಿ ನೀಡಲು ಮುಂದಾಗಬೇಕು, ಅವಿದ್ಯಾವಂತರಿದ್ದರೆ ಪೂರಕ ಎಲ್ಲ ಮಾಹಿತಿ ನೀಡಿ ಪ್ರಕ್ರಿಯೆ ಪೂರ್ಣಗೊಳಿಸಬೇಕು, ಯಾವುದೇ ಕಾರಣಕ್ಕೂ ಅರ್ಹರು ಈ ಪ್ರಕ್ರಿಯೆಯಿಂದ ಹೊರಗುಳಿಯಬಾರದು. ಚುನಾವಣಾ ಆಯೋಗದ ಈ ಅಭಿಯಾನದ ಯಶಸ್ವಿಗೆ ಅಧಿಕಾರಿಗಳೊಂದಿಗೆ ಎಲ್ಲರೂ ಕೈಜೋಡಿಸೋಣ ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಪ್ರಮುಖರು, ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.





