ಬೆಳಗಾಯಿತು ವಾರ್ತೆ| Www.belagayithu.in
ಬಳ್ಳಾರಿ: ಉರುಕೊಂಡ ಗವಿಮಠ ಸಂಸ್ಥಾನದ ಹಿರಿಯ ಜಗದ್ಗುರು ಶ್ರೀ ಚನ್ನಬಸವ ರಾಜೇಂದ್ರ ಮಹಾಸ್ವಾಮಿಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ, ನಗರದ ಕಲ್ಯಾಣಸ್ವಾಮಿ ಮಠದಲ್ಲಿ ಇರಿಸಲಾಗಿದ್ದ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಗುರುವಾರ ಬೆಳಿಗ್ಗೆ ಭಕ್ತರು, ಗಣ್ಯರು ಹಾಗೂ ವಿವಿಧ ಮಠಾಧೀಶರು ಪಡೆದು ಭಾವಪೂರ್ಣ ನಮನ ಸಲ್ಲಿಸಿದರು.
ಬೆಳಗಿನ ಜಾವ ಲಿಂಗೈಕ್ಯರಾದ ಶ್ರೀಗಳ ಅಗಲಿಕೆಯಿಂದ ಭಕ್ತ ಸಮೂಹದಲ್ಲಿ ತೀವ್ರ ಶೋಕ ಆವರಿಸಿತ್ತು. ಅಂತಿಮ ದರ್ಶನಕ್ಕಾಗಿ ಸಾವಿರಾರು ಭಕ್ತರು ಕಲ್ಯಾಣಸ್ವಾಮಿ ಮಠಕ್ಕೆ ಆಗಮಿಸಿ ಶ್ರೀಗಳ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಿದರು.
ಈ ಸಂದರ್ಭದಲ್ಲಿ ವಿವಿಧ ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು, ಸಾಮಾಜಿಕ ಮುಖಂಡರು ಹಾಗೂ ಸಾರ್ವಜನಿಕರು ಶ್ರೀಗಳ ಆಧ್ಯಾತ್ಮಿಕ ಸೇವೆ, ಸಮಾಜಮುಖಿ ಕಾರ್ಯಗಳು ಮತ್ತು ಧಾರ್ಮಿಕ ಪರಂಪರೆಯನ್ನು ಸ್ಮರಿಸಿದರು.
ಮಠದ ಆವರಣದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಶ್ರೀಗಳ ಅಂತಿಮ ದರ್ಶನಕ್ಕೆ ಭಕ್ತರ ದಂಡೇ ಹರಿದುಬಂದಿತ್ತು.





