ಬೆಳಗಾಯಿತು ವಾರ್ತೆ| www.belagayithu.in
ಹೊಸದಿಲ್ಲಿ: ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾ ಅವರನ್ನು ವಜಾಗೊಳಿಸಿದ್ದು, ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. 2023ರಿಂದ ಈ ಹುದ್ದೆಯನ್ನು ನಿರ್ವಹಿಸುತ್ತಿದ್ದ ಚಡ್ಡಾ ಅವರ ಸ್ಥಾನಕ್ಕೆ ಪಂಜಾಬ್ ನ ಸಂಸದ ಅಶೋಕ್ ಮಿತ್ತಲ್ ಅವರನ್ನು ನೇಮಕ ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ಬದಲಾವಣೆಗೆ ಸಂಬಂಧಿಸಿ ರಾಜ್ಯಸಭಾ ಕಾರ್ಯದರ್ಶಿಗೆ ಅಧಿಕೃತ ಪತ್ರ ಕಳುಹಿಸಲಾಗಿದ್ದು, ಸಂಸತ್ತಿನಲ್ಲಿ ಮಾತನಾಡಲು ಚಡ್ಡಾ ಅವರಿಗೆ ಸಮಯ ನೀಡಬಾರದು ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.
ಪಕ್ಷದ ಉನ್ನತ ನಾಯಕತ್ವ ಹಾಗೂ ಇತ್ತೀಚಿನ ಬೆಳವಣಿಗೆಗಳ ಕುರಿತು ಚಡ್ಡಾ ಅವರು ಮೌನ ವಹಿಸಿರುವುದು ಈ ಕ್ರಮಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಇದರಿಂದ ಎಎಪಿಯೊಳಗೆ ಭಿನ್ನಾಭಿಪ್ರಾಯಗಳಿರುವ ಬಗ್ಗೆ ವದಂತಿಗಳು ಹರಿದಾಡುತ್ತಿವೆ.
ಫೆಬ್ರವರಿಯಲ್ಲಿ ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಮಾಜಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಸೇರಿದಂತೆ ಇತರರು ನ್ಯಾಯಾಲಯದಿಂದ ಎಲ್ಲಾ ಆರೋಪಗಳಿಂದ ಮುಕ್ತರಾದ ಬಳಿಕವೂ ಚಡ್ಡಾ ಯಾವುದೇ ಸಾರ್ವಜನಿಕ ಪ್ರತಿಕ್ರಿಯೆ ನೀಡಿರಲಿಲ್ಲ. ತಮ್ಮ ಸಹೋದ್ಯೋಗಿಗಳಿಗೆ ಅಭಿನಂದನೆ ತಿಳಿಸುವ ಪೋಸ್ಟ್ ಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದಿರುವುದು ಪಕ್ಷದೊಳಗೆ ಚರ್ಚೆಗೆ ಗ್ರಾಸವಾಗಿತ್ತು.





