ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ನಗರದಲ್ಲಿ ಹೆಚ್ಚುತ್ತಿರುವ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಳ್ಳಾರಿ ನಗರ ಜನಜಾಗೃತಿ ಸಂಘದ ವತಿಯಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಸಂಘದ ಅಧ್ಯಕ್ಷ ಹುಂಡೇಕರ್ ರಾಜೇಶ್ ಅವರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಚೈನ್ ಸ್ನಾಚಿಂಗ್, ದ್ವಿಚಕ್ರ ವಾಹನ ಕಳ್ಳತನ ಹಾಗೂ ದರೋಡೆ ಪ್ರಕರಣಗಳು ಹೆಚ್ಚುತ್ತಿರುವುದರಿಂದ ನಾಗರಿಕರು ಭಯಭೀತ ವಾತಾವರಣದಲ್ಲಿ ಜೀವನ ನಡೆಸುವಂತಾಗಿದೆ. ನಗರದ ಪ್ರಮುಖ ವೃತ್ತಗಳು, ಸ್ಲಂ ಪ್ರದೇಶಗಳು ಹಾಗೂ ಮುಖ್ಯ ರಸ್ತೆಗಳಲ್ಲಿಯೇ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಜೊತೆಗೆ ರಾತ್ರಿ ವೇಳೆ ಪೊಲೀಸ್ ಸಿಬ್ಬಂದಿಯಿಂದ ಕಡ್ಡಾಯ ಪೆಟ್ರೋಲಿಂಗ್ ನಡೆಸಿ, ರೈಲ್ವೇ ನಿಲ್ದಾಣ ಮತ್ತು ಬಸ್ ನಿಲ್ದಾಣಗಳಲ್ಲಿ ಹೆಚ್ಚುವರಿ ಭದ್ರತೆ ಒದಗಿಸಬೇಕು ಎಂದ ಅವರು, ಹೊಸದಾಗಿ ಅಭಿವೃದ್ಧಿಯಾಗುತ್ತಿರುವ ಲೇಔಟ್ ಪ್ರದೇಶಗಳಲ್ಲಿ ಯುವಕರು ದುಶ್ಚಟಗಳಿಗೆ ಒಳಗಾಗುತ್ತಿದ್ದಾರೆ. ಡ್ರಗ್ಸ್ ಮತ್ತು ಮದ್ಯಪಾನದಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ತ್ವರಿತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸ್ವಾಮಿ ನಾಯ್ಕ್, ಭಾಷಾ, ಗಡಿಲಿಂಗ, ನಾಗರಾಜ್, ಗಂಗಾಧರ, ವೀರೇಶ್, ಪವನ್, ರಾಮರೆಡ್ಡಿ, ಚಂದ್ರ, ಶಂಕರ್, ಮಾಸ್ತನ್, ಪ್ರವೀಣ್, ಶ್ರೀನಿವಾಸ್, ದೇವರಾಜ್, ಬಸವರಾಜ್, ರಾಮಲಿ ನಾಯ್ಕ್, ಯಲ್ಲಪ್ಪ, ಹುಸೇನ್, ಅನಿಲ್, ಅನ್ವರ್, ದುರುಗಪ್ಪ, ನಾಗೇಂದ್ರ, ದೇವೇಂದ್ರ, ಸೀನ, ಮಹೇಶ್ ಸೇರಿದಂತೆ ಅನೇಕ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.





