ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ನಗರದ ಸರ್ಕಾರಿ ಆಸ್ಪತ್ರೆಯಾದ ಬಿಮ್ಸ್ ನಲ್ಲಿ ರೋಗಿಗಳು ಭಾರೀ ತೊಂದರೆ ಅನುಭವಿಸುತ್ತಿದ್ದಾರೆ. ಹೊರರೋಗಿಗಳ ವಿಭಾಗದ (OPD) ಚೀಟಿ ಪಡೆಯಲು ಮುಂಜಾನೆ ಸರತಿ ಸಾಲಿನಲ್ಲಿ ನಿಂತರೂ, ಚೀಟಿ ಸಿಗಲು ಗಂಟೆಗಳ ಕಾಲ ಕಾಯಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
ಪ್ರತಿ ದಿನ ನೂರಾರು ರೋಗಿಗಳು ಆಸ್ಪತ್ರೆಗೆ ಆಗಮಿಸುತ್ತಿದ್ದರೂ, ಟೋಕನ್ ವಿತರಣೆ ವ್ಯವಸ್ಥೆ ನಿಧಾನಗತಿಯಲ್ಲಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಹಿರಿಯ ನಾಗರಿಕರು, ಮಹಿಳೆಯರು ಹಾಗೂ ದೂರದ ಗ್ರಾಮಗಳಿಂದ ಬಂದಿರುವ ರೋಗಿಗಳು ಹೆಚ್ಚು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬೀಮ್ಸ್ ನಲ್ಲಿ ರೋಗಿಗಳಿಗೆ ಚೀಟಿ ನೀಡಲು ಸಾಕಷ್ಟು ಕೌಂಟರ್‌ಗಳು ಇಲ್ಲದಿರುವುದು, ಸಿಬ್ಬಂದಿ ಕೊರತೆ ಮತ್ತು ಸರಿಯಾದ ವ್ಯವಸ್ಥೆಯ ಅಭಾವದಿಂದ ಈ ಸಮಸ್ಯೆ ಉಂಟಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲವು ರೋಗಿಗಳು ಬೆಳಿಗ್ಗೆ 6 ಗಂಟೆಯಿಂದಲೇ ಸಾಲಿನಲ್ಲಿ ನಿಂತರೂ, ಮಧ್ಯಾಹ್ನದವರೆಗೂ ಚೀಟಿ ಸಿಕ್ಕಿರುವುದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು, ಹೆಚ್ಚುವರಿ ಕೌಂಟರ್‌ಗಳನ್ನು ತೆರೆಯುವುದು ಹಾಗೂ ಆನ್‌ಲೈನ್ ಟೋಕನ್ ವ್ಯವಸ್ಥೆಯನ್ನು ಜಾರಿಗೆ ತರುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸಮಸ್ಯೆ ಮುಂದುವರಿದರೆ ರೋಗಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದ್ದು, ಹೀಗೆ ಮುಂದುವರೆದರೆ ಬೀಮ್ಸ್ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.
ಹೆಚ್ಚಿನ ಸುದ್ದಿಗಳಿಗಾಗಿ ಬಳ್ಳಾರಿ ಬೆಳಗಾಯಿತು ದಿನಪತ್ರಿಕೆ ಹಾಗೂ ಯೂಟ್ಯೂಬ್ ಚಾನಲ್ ನೋಡಿ





