“ಸುವರ್ಣ ಬಳ್ಳಾರಿ ಅಲ್ಲ, ಭ್ರಷ್ಟಾಚಾರ ಬಳ್ಳಾರಿ: ಮೀನಳ್ಳಿ ತಾಯಣ್ಣ ಆರೋಪ


ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ಜಿಲ್ಲೆಯಾದ್ಯಂತ ಆಡಳಿತ ವ್ಯವಸ್ಥೆಯಲ್ಲೇ ಭ್ರಷ್ಟಾಚಾರ ಬೇರುಬಿಟ್ಟಿದೆ ಎಂದು ಆರೋಪಿಸಿರುವ ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಅವರು, “ಸುವರ್ಣ ಬಳ್ಳಾರಿ ಅಲ್ಲ, ಇದು ಭ್ರಷ್ಟಾಚಾರ ಬಳ್ಳಾರಿ” ಎಂದು ತೀವ್ರ ವಾಗ್ದಾಳಿ ನಡೆಸಿದರು.
ನಗರದ ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಸರ್ಕಾರಿ ಇಲಾಖೆಗೆ ಸಣ್ಣ ಕೆಲಸಕ್ಕೂ ಸಾರ್ವಜನಿಕರು ತೆರಳಿದರೂ ಲಂಚವಿಲ್ಲದೆ ಕಾರ್ಯ ನಡೆಯದ ಪರಿಸ್ಥಿತಿ ನಿರ್ಮಾಣವಾಗಿದೆ. “ಹಣ ನೀಡದೇ ಇದ್ದರೆ ಕೆಲಸವೇ ಆಗುವುದಿಲ್ಲ. ಕೇಳಿದರೆ ‘ಈ ಹುದ್ದೆಗೆ ನಾವು ಹಣ ಕೊಟ್ಟು ಬಂದಿದ್ದೇವೆ, ಅದನ್ನು ಹಿಂತಿರುಗಿಸಿಕೊಳ್ಳಬೇಕು’ ಎನ್ನುವ ಮನೋಭಾವ ಅಧಿಕಾರಿಗಳಲ್ಲಿ ಬೆಳೆದಿದೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಬಳ್ಳಾರಿಯಲ್ಲಿ ಅಭಿವೃದ್ಧಿ ಕಾರ್ಯಗಳು ಶೂನ್ಯವಾಗಿದ್ದು, ಗುತ್ತಿಗೆದಾರರು ಹಾಗೂ ಕೆಲ ಅಧಿಕಾರಿಗಳ ದರ್ಬಾರ್ ನಡೆಯುತ್ತಿದೆ. ಇದನ್ನು ಪ್ರಶ್ನಿಸುವವರೇ ಇಲ್ಲದಂತಾಗಿದೆ. ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡ ತಾಯಣ್ಣ, ತಮ್ಮ ಸ್ವಂತ ಜಮೀನಿನ ದಾಖಲೆಗಾಗಿ ಸಿಡಿಗಿನಮೊಳ ಗ್ರಾಮ ಪಂಚಾಯಿತಿಯಲ್ಲಿ ಒಂದು ವರ್ಷದಿಂದ ಅಲೆದಾಡಿದರೂ ಯಾವುದೇ ಕ್ರಮವಾಗಿಲ್ಲ ಎಂದು ದೂರಿದರು.
ಪಿಡಿಒ ನುಶ್ರತ್ ಬಾನು ಅವರನ್ನು ಪ್ರಶ್ನಿಸಿದಾಗ, ಮೇಲಧಿಕಾರಿಗಳ ಸೂಚನೆಯಂತೆ ಎಕರೆಗೆ 50 ಸಾವಿರ ಲಂಚ ನೀಡಬೇಕೆಂದು ತಿಳಿಸಿರುವುದಾಗಿ ಆರೋಪಿಸಿದರು.
ಈ ಹಿನ್ನೆಲೆಯಲ್ಲಿ, ತಮ್ಮ ಪುತ್ರ ರವಿಕುಮಾರ್ ಮೂಲಕ ಲೋಕಾಯುಕ್ತರಿಗೆ ದೂರು ನೀಡಲಾಗಿದ್ದು, ಲಂಚ ಸ್ವೀಕರಿಸುವಾಗಲೇ ಪಿಡಿಒ ಹಾಗೂ ಪಂಚಾಯಿತಿ ಬಿಲ್ ಕಲೆಕ್ಟರ್ ಓಬಳೇಶ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಇದರ ಜೊತೆಗೆ, ತಾ.ಪಂ. ಇಓ ಶ್ರೀಧರ ಬಾರಿಕರ್, ಆಡಳಿತಾಧಿಕಾರಿ ಗಿರೀಶ್ ಸೇರಿದಂತೆ ಸಂಬಂಧಪಟ್ಟ ಮೇಲಧಿಕಾರಿಗಳ ವಿರುದ್ಧವೂ ಸಮಗ್ರ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
“ಜಿಲ್ಲೆಯ ಪ್ರತಿಯೊಂದು ಇಲಾಖೆಯಲ್ಲೂ ಇದೇ ರೀತಿಯ ಭ್ರಷ್ಟಾಚಾರ ನಡೆಯುತ್ತಿದೆ. ಇದನ್ನು ತಡೆಗಟ್ಟದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಹೊನ್ನೂರು ಸ್ವಾಮಿ, ಯಲ್ಲನಗೌಡ, ರವಿಕುಮಾರ್, ಅಶೋಕ, ಜಮೀಲಾ, ಶಬಾನಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles