ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ : ಜಿಲ್ಲೆಯಲ್ಲಿ ನಡೆದಿದ್ದ ಅನುಮಾನಾಸ್ಪದ ಸಾವಿನ ಪ್ರಕರಣವು ಕೊಲೆ ಪ್ರಕರಣವಾಗಿ ಬದಲಾಗಿದ್ದು, ಪೊಲೀಸರು ಕ್ಷಿಪ್ರ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಿ.ಡಿ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾರೇಕಲ್ಲು ಗ್ರಾಮದಲ್ಲಿ ಮಾರ್ಚ್ 21, 2026ರಂದು ವೀರಮ್ಮ (60) ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಈ ಸಂಬಂಧ ಯುಡಿಆರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು. ನಂತರ ಮಾರ್ಚ್ 24ರಂದು ಮರಣೋತ್ತರ ಪರೀಕ್ಷಾ ವರದಿ ಬಂದಾಗ, ಹರಿತವಾದ ಆಯುಧದಿಂದ ಕೊಲೆ ಮಾಡಲಾಗಿದೆ ಎಂಬುದು ಬೆಳಕಿಗೆ ಬಂದಿದೆ. ತಕ್ಷಣವೇ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿವರ್ತಿಸಿ ಪೊಲೀಸರು ತನಿಖೆ ಕೈಗೊಂಡರು.
ಡಿ.ಎಸ್.ಪಿ. ಮಾಲತೇಶ ಕೂನಬೇವು, ಸಿ.ಪಿ.ಐ. ಬಿ. ಸುಭಾಷ್ ಚಂದ್ರ ಹಾಗೂ ಪಿ.ಎಸ್.ಐ.ಗಳಾದ ತಿಮ್ಮಾರೆಡ್ಡಿ, ಸುರೇಶಪ್ಪ ಸೇರಿದಂತೆ ಸಿಬ್ಬಂದಿಗಳ ತಂಡವನ್ನು ರಚಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.
ತನಿಖೆಯಲ್ಲಿ ಬೆಚ್ಚಿಬೀಳಿಸುವ ಅಂಶ ಬೆಳಕಿಗೆ ಬಂದಿದೆ. ಮೃತ ವೀರಮ್ಮಳ ಮೊಮ್ಮಗ ಎಂ. ವಿರೇಂದ್ರ (21)ನೇ ಆರೋಪಿಯಾಗಿದ್ದು, ಅಜ್ಜಿಯ ಬಳಿ ಇದ್ದ ನಗದು ಹಣ ಮತ್ತು ಬಂಗಾರವನ್ನು ಕಳವು ಮಾಡುವ ಉದ್ದೇಶದಿಂದ ಮಾರ್ಚ್ 20ರಂದು ರಾತ್ರಿ ಅಜ್ಜಿಯ ಮನೆಯಲ್ಲಿ ಉಳಿದುಕೊಂಡಿದ್ದನು. ತಡರಾತ್ರಿ ನಿದ್ರೆಯಲ್ಲಿದ್ದ ಅಜ್ಜಿಯ ಕತ್ತನ್ನು ಚಾಕುವಿನಿಂದ ಕೊಯ್ದು ಕೊಲೆ ಮಾಡಿ, ಮನೆಯಲ್ಲಿದ್ದ ಸುಮಾರು 80 ಗ್ರಾಂ ನಕಲಿ ಬಂಗಾರದ ಆಭರಣಗಳು ಹಾಗೂ ರೂ. 23,000 ನಗದು ಹಣವನ್ನು ದೋಚಿದ್ದಾನೆ.
ಅಲ್ಲದೆ, ತನ್ನ ಕೃತ್ಯವನ್ನು ಮರೆಮಾಚಲು ಶವದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಾಕ್ಷ್ಯ ನಾಶಪಡಿಸಲು ಪ್ರಯತ್ನಿಸಿದ್ದಾನೆ. ಬಳಿಕ ತನ್ನ ತಂದೆಯ ಊರಾದ ಸಿರುಗುಪ್ಪ ತಾಲ್ಲೂಕಿನ ಹಾಗಲೂರು ಗ್ರಾಮಕ್ಕೆ ತೆರಳಿ, ಕೊಲೆಗೆ ಬಳಸಿದ ಚಾಕು, ರಕ್ತದ ಮಸುಕಾದ ಬಟ್ಟೆಗಳು ಹಾಗೂ ದೋಚಿದ ವಸ್ತುಗಳನ್ನು ಬಚ್ಚಿಟ್ಟಿದ್ದನು.
ಪೊಲೀಸರು ಆರೋಪಿಯನ್ನು ಬಂಧಿಸಿ, ಕೊಲೆಗೆ ಬಳಸಿದ ವಸ್ತುಗಳನ್ನು ಪೊಲೀಸರು
ಜಪ್ತಿ ಮಾಡಿದ್ದಾರೆ. ಇದೀಗ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಈ ಪ್ರಕರಣವನ್ನು ಬೇಧಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್ ಪ್ರಶಂಸಿಸಿದ್ದಾರೆ.





