ಬೆಳಗಾಯಿತು ವಾರ್ತೆ | www.belagayithu.in
ಬೆಂಗಳೂರು, ಮೇ 28: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ಒಂದು ಬ್ಯಾಂಕ್ನಿಂದ ಇನ್ನೊಂದು ಬ್ಯಾಂಕ್ಗೆ ನಿಗಮದ ಹಣ ವರ್ಗಾವಣೆ ಆಗಿರುವ ಬಗ್ಗೆ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ್ ನಮಗೆ ಮಾಹಿತಿ ನೀಡಿದ್ದಾರೆ. ಸುಮಾರು 87 ಕೋಟಿ ರೂ. ಹಣ ವರ್ಗಾವಣೆ ಮಾಡಲಾಗಿದೆ. ಈಗಾಗಲೇ 23 ಕೋಟಿ ಹಣ ನಿಗಮದ ಖಾತೆಗೆ ವಾಪಸ್ ಆಗಿದೆ. ಬಾಕಿ ಉಳಿದ ಹಣವನ್ನು ನಿಗಮದ ಖಾತೆಗೆ ಮರು ವರ್ಗಾವಣೆ ಮಾಡುವಂತೆ ಈಗಾಗಲೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗಿದೆ. ಸಂಜೆಯೊಳಗೆ ಉಳಿದ 50 ಕೋಟಿ ರೂ. ಹಣ ಜಮೆ ಆಗುತ್ತದೆ ಎಂದು ಪರಿಶಿಷ್ಟ ಕಲ್ಯಾಣ ಸಚಿವ ಬಿ. ನಾಗೇಂದ್ರ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಆತ್ಮಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ಹೇಗೆ ಹಣ ದುರುಪಯೋಗ ಆಗಿದೆ ಎಂಬುವುದರ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಎಂ.ಡಿ ಕೂಡ ದೂರು ನೀಡಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಕೂಡ ಇದರಲ್ಲಿ ಶಾಮೀಲಾದಂತೆ ಕಾಣುತ್ತಿದೆ. ನಮ್ಮ ಇಲಾಖೆ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದೆ. ಪ್ರಕರಣದ ಬಗ್ಗೆ ಮುಖ್ಯಮಂತ್ರಿಗಳು ಕೂಡ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ಒಂದು ಬ್ಯಾಂಕ್ ನಿಂದ ಇನ್ನೊಂದು ಬ್ಯಾಂಕ್ಗೆ ಹಣ ವರ್ಗಾವಣೆಯಾದ ಬಗ್ಗೆ ನಿಗಮದ ಎಂಡಿ ಅವರ ಗಮನಕ್ಕೂ ಬಂದಿಲ್ಲ. ನಿಗಮದ ಎಂಡಿಯವರ ಸಹಿ ಎಫ್ಎಸ್ಎಲ್ಗೆ ಕಳುಹಿಸಿದ್ದೇವೆ. ಅದು ಎಂಡಿ ಪದ್ಮನಾಭ್ ಅವರ ಸಹಿಯೇ ಅಂತ ಗೊತ್ತಾದರೆ ಅವರನ್ನು ವಜಾ ಮಾಡುತ್ತೇವೆ. ಇದರಲ್ಲಿ ಯಾರ ಕೈವಾಡ ಇದೆ ಅದನ್ನು ಪತ್ತೆ ಹೆಚ್ಚುತ್ತೇವೆ. ಸಿಐಡಿ ಈಗಾಗಲೆ ತನಿಖೆ ಆರಂಭಿಸಿದೆ ಎಂದರು.
ಇದರಲ್ಲಿ ನನ್ನ ಪಾತ್ರ ಇಲ್ಲ, ರಾಜೀನಾಮೆ ಕೊಡುವ ಪ್ರಶ್ನೆಯೇ ಬರಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮದ ಎಂಡಿ ವಿರುದ್ಧ ಕ್ರಮ ಆಗಿಯೇ ಆಗುತ್ತದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಬಿಜೆಪಿಯವರು ಕೇಳುತ್ತಿರುವುದು ಅವರ ಪ್ರಕಾರ ಸರಿ ಇರಬಹುದು. ಆದರೆ ಇದರಲ್ಲಿ ನನ್ನ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದರು.





