ಬೆಳಗಾಯಿತು ವಾರ್ತೆ | www.belagayithu.in
ಬಳ್ಳಾರಿ: ಬಳ್ಳಾರಿ ಅಂಚೆ ಕಚೇರಿಯಲ್ಲಿ ಸ್ಪೀಡ್ ಪೋಸ್ಟ್ ಸಾರ್ಟಿಂಗ್ ವ್ಯವಸ್ಥೆಯನ್ನು ಸಾರ್ಟಿಂಗ್ ಆಫೀಸಿನಲ್ಲಿ ಮುಂದುವರಿಸುವಂತೆ ಒತ್ತಾಯಿಸಿ ಮಂಗಳವಾರ ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ಅಧ್ಯಕ್ಷ ಕೆ.ಎಮ್ ಮಹೇಶ್ವರ ಸ್ವಾಮಿ ಅವರು ಬಳ್ಳಾರಿ ಅಂಚೆ ಕಚೇರಿಯ ಸೂಪರಿಡೆಂಟ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ನಂತರ ಮಾತನಾಡಿದ ಅವರು, ಭಾರತದ ಸರ್ಕಾರದ ಅಂಚೆ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಳ್ಳಾರಿಯ ಸಾರ್ಟಿಂಗ್ ಆಫೀಸಿನಲ್ಲಿ ಸಾಮಾನ್ಯ ಪತ್ರ, ರಿಜಿಸ್ಟರ್ ಪೋಸ್ಟ್ ಪತ್ರ, ಸ್ಪೀಡ್ ಪೋಸ್ಟ್ ಪತ್ರ, ಪಾರ್ಸಲ್ ಇವುಗಳನ್ನು ಬಳ್ಳಾರಿಯ ಜನತೆ ಸದುಪಯೋಗಪಡಿಸುವುದರ ಮೂಲಕ ಭಾರತ ಸರ್ಕಾರದ ಅಂಚೆ ಇಲಾಖೆಗೆ ಸಾಕಷ್ಟು ವರಮಾನವನ್ನು ತಂದು ಕೊಡುತ್ತಿರುತ್ತಾರೆ. ಆದರೆ ಕಳೆದ ಕೆಲವು ದಿನಗಳ ಹಿಂದೆ ಬಳ್ಳಾರಿಯ ಸಾರ್ಟಿಂಗ್ ಕಚೇರಿಯಲ್ಲಿ ಪಾರ್ಸಲ್ ಸಾರ್ಟಿಂಗ್ ವ್ಯವಸ್ಥೆಯನ್ನು ತೆಗೆದುಹಾಕಲಾಗಿದ್ದು, ಕಚೇರಿಯಲ್ಲಿ ಬರಿ ಬುಕ್ಕಿಂಗ್ ಮಾತ್ರ ಮಾಡಲಾಗುತ್ತಿದೆ. ಬಳ್ಳಾರಿಯಿಂದ ಸಾರ್ಟಿಂಗ್ ಇಲ್ಲದಿರುವುದರಿಂದ ಗ್ರಾಹಕರು ಕಳಿಸುವ ಪಾರ್ಸಲ್‌ಗಳು ಬೇರೆ ಬೇರೆ ಸ್ಥಳಗಳಿಗೆ ಹೋಗಿ ಸಾಕಷ್ಟು ತಡವಾಗಿ ಅವರ ಕೈಗೆ ತಲುಪುತ್ತವೆ. ಈ ಅವ್ಯವಸ್ಥೆಯ ಜೊತೆಗೆ ಅಂಚೆ ಇಲಾಖೆ ಹಿರಿಯ ಅಧಿಕಾರಿಗಳು ಬಳ್ಳಾರಿಯ ಸ್ಪೀಡ್ ಪೋಸ್ಟ್ ಸಾರ್ಟಿಂಗ್ ವ್ಯವಸ್ಥೆಯನ್ನು ಸ್ಥಳಾಂತರಿಸುವ ಹುನ್ನಾರ ನಡೆಸಲಾಗುತ್ತಿದೆ ಎಂದರು.
ನೂತನ ಲೋಕಸಭೆಗೆ ಜನಪ್ರತಿನಿಧಿಗಳು ಆಯ್ಕೆಯಾಗುವ ಈ ಸಂದರ್ಭದಲ್ಲಿ ಅಂಚೆ ಇಲಾಖೆ ಏಕಮುಖವಾಗಿ ಸಾರ್ಟಿಂಗ್ ಆಫೀಸ್ ಸ್ಥಳಾಂತರದ ನಿರ್ಧಾರವನ್ನು ರಾಜ್ಯ ರೈಲ್ವೆ ಕ್ರಿಯಾ ಸಮಿತಿ ವಿರೋಧಿಸುತ್ತದೆ. ಈ ಸ್ಥಳಾಂತರ ಪ್ರಕ್ರಿಯೆಯನ್ನು ಕೂಡಲೇ ಕೈಬಿಡುವಂತೆ ಒತ್ತಾಯಿಸಿ ಈ ಹಿಂದಿನಂತೆ ಪುನಃ ಪಾರ್ಸಲ್ ವ್ಯವಸ್ಥೆಯನ್ನು ಬಳ್ಳಾರಿಯಿಂದಲೇ ಆರಂಭಿಸಬೇಕೆಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ಸದಸ್ಯರಾದ ಎನ್.ಸಿ ವೀರಭದ್ರಪ್ಪ, ಆರ್.ಎಮ್ ಚಂದ್ರಮೌಳಿ, ಅಂಪೇರು ಹಾಲೇಶ್ವರ ಗೌಡ, ಹೆಚ್. ಕೆ. ಗೌರಿಶಂಕರ ಜಾಲಿಹಾಳು, ಶ್ರೀಧರ್ ಗೌಡ, ಬಿ.ಎಂ.ಏರಿಸ್ವಾಮಿ, ಜಿ. ನೀಲಕಂಠಪ್ಪ, ಕೆಎಂ ಕೊಟ್ರೇಶ್, ಎಂ ಲೋಕನಾಥ್ ಸ್ವಾಮಿ, ಬಿ.ಎಂ ಬಸವರಾಜ್ ಸ್ವಾಮಿ, ವಿ. ಸೂರ್ಯ ಪ್ರಕಾಶ್, ಕೊಳೂರು ಚಂದ್ರಶೇಖರ್ ಗೌಡ ಹಾಜರಿದ್ದರು.





