ಬಳ್ಳಾರಿ: ನಗರದ ರಾಘವೇಂದ್ರ ಕಾಲೋನಿಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಶಬರಿ ಅಯ್ಯಪ್ಪ ಟ್ರಸ್ಟ್ ಅವರಿಂದ ಡಿ.27ರಂದು 41ನೇ ವಾರ್ಷಿಕ ಮಂಡಲ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಶಬರಿ ಅಯ್ಯಪ್ಪ ಟ್ರಸ್ಟ್ ನ ಛೇರ್ಮನ್ ಜಯಪ್ರಕಾಶ್ ಗುಪ್ತ ಅವರು ಹೇಳಿದರು.
ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಆಯೋಜನೆ ಮಾಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 41 ವರ್ಷದಿಂದ ಮಂಡಲ ಪೂಜೆ ಮಾಡುತ್ತಾ ಬರಲಾಗಿದೆ. ಪ್ರತಿ ವರ್ಷ ವಿಶೇಷವಾಗಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತಿದೆ. ಕಾರ್ಯಕ್ರಮ ಅದ್ಧೂರಿಯಾಗಿ ಜರುಗಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಮತ್ತು ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ನಂತರ ವಿಮ್ಸ್ ನ ಟಿಬಿ ಆಸ್ಪತ್ರೆಯ ಅಧೀಕ್ಷಕ ಡಾ. ಸುರೇಶ್ ಮಾತನಾಡಿ, ಸಣ್ಣ ವಯಸ್ಸಿನಿಂದಲೇ ಸಂಗೀತ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಂಗೀತವನ್ನು ಕಲಿತ ಸೃಷ್ಟಿ ಅವರು ಜೀ ವಾಹಿನಿಯ ಸರಿಗಮಪ ಸೀಜನ್ 19ರ ಸೆಮಿಫೈನಲ್ಸ್ ಗೆ ತಲುಪಿದ್ದಾರೆ. ತನ್ನ ಮೂರನೇ ವಯಸ್ಸಿನಲ್ಲೇ ಸಂಗೀತ ಅಭ್ಯಾಸ ಮಾಡಿದ ಇವರು ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯಂಗ್ ಅಚಿವರ್, ಗಾನ ಕಿಶೋರಿ ಎಂಬ ಅವಾರ್ಡ್ ಗಳೊಂದಿಗೆ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಕಾರ್ಯದರ್ಶಿ ಹೆಚ್ ಎಂ ಮಂಜುನಾಥ್, ಖಜಾಂಚಿ ಎ. ಮಹೇಶ್ ಕುಮಾರ್, ಸರಿಗಮಪ ಗಾಯಕಿ ಸೃಷ್ಠಿ, ಸಿ.ಎಂ ಮತ್ತು ರೈಮೆಕ್ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಸುನೀತಾ ಸೇರಿದಂತೆ ಇತರರು ಹಾಜರಿದ್ದರು.
ಕಾರ್ಯಕ್ರಮಗಳು
ಬೆ. 6 ಕ್ಕೆ ಧ್ವಜಾರೋಹಣ, 6.30ಕ್ಕೆ ವಿಶೇಷ ಅಷ್ಟದ್ರವ್ಯಾಭಿಷೇಕ, 7.30 ಯಿಂದ 9.30ವರೆಗೆ ಗಣ ಹೋಮ, ಮೃತ್ಯುಂಜಯ ಹೋಮ, ನವಗ್ರಹ ಹೋಮ, ಶ್ರೀ ಅಯ್ಯಪ್ಪ ಸ್ವಾಮಿ ಹೋಮ ಮತ್ತು ಸುದರ್ಶನ ಹೋಮ, ಶಿವನಿಗೆ ರುದ್ರಾಭಿಷೇಕ, 10ಗಂಟೆಗೆ ಮಹಾ ಮಂಗಳಾರತಿ, 10.30ಕ್ಕೆ ಲಕ್ಷಾರ್ಚನೆ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮ ಗಳು ನಡೆಯಲಿದೆ.
ಸಂಜೆ ಸೃಷ್ಟಿ ಅವರಿಂದ ಸಂಗೀತ ಕಾರ್ಯಕ್ರಮ, ಹಾಗೂ ರಾತ್ರಿ 9.45ಕ್ಕೆ 18 ಮೆಟ್ಟಿಲು ಪಡಿ ಪೂಜೆ ಆಯೋಜನೆ ಮಾಡಲಾಗಿದೆ.
