ಬೆಳಗಾಯಿತು ವಾರ್ತೆ | Www.belagayithu.in
ಬೆಂಗಳೂರು: ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಕರ್ನಾಟಕದಲ್ಲಿ ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (ಹೆಚ್‌ಎಂಪಿವಿ) ನ ಎರಡು ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.
ಮೊದಲ ಪ್ರಕರಣವು ಬೆಂಗಳೂರಿನಲ್ಲಿ 3 ತಿಂಗಳ ಹೆಣ್ಣುಮಗುವಿನಲ್ಲಿ ಪತ್ತೆಯಾಗಿತ್ತು. ಬ್ರಾಂಕೋಪ್ನ್ಯುಮೋನಿಯಾದೊ0ದಿಗೆ ಆಸ್ಪತ್ರೆಗೆ ದಾಖಲಾದ ನಂತರ ಹೆಚ್‌ಎಂಪಿವಿ ರೋಗನಿರ್ಣಯ ಮಾಡಲಾಯಿತು. ಸಚಿವಾಲಯದ ಮಾಹಿತಿ ಪ್ರಕಾರ ಆಕೆಯನ್ನು ಡಿಸ್ಚಾರ್ಜ್ ಮಾಡಲಾಗಿದೆ. ಎರಡನೇ ಪ್ರಕರಣವು 8 ತಿಂಗಳ ಗಂಡು ಶಿಶುವಿನಲ್ಲಿ ಪತ್ತೆಯಾಗಿದ್ದು ಪ್ರಸ್ತುತ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.
ಎರಡು ಶಿಶುಗಳಿಗೂ ಯಾವುದೇ ಅಂತರರಾಷ್ಟ್ರೀಯ ಪ್ರಯಾಣದ ಇತಿಹಾಸವಿಲ್ಲ ಎಂದು ಐಸಿಎಂಆರ್ ದೃಢಪಡಿಸಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸೋಮವಾರ ಮಧ್ಯಾಹ್ನ ಆರೋಗ್ಯ ಆಯುಕ್ತ ಶಿವಕುಮಾರ್ ಕೆಬಿ ಮತ್ತು ಪ್ರಧಾನ ಆರೋಗ್ಯ ಕಾರ್ಯದರ್ಶಿ ಹರ್ಷಗುಪ್ತ ಸೇರಿದಂತೆ ಆರೋಗ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯವು ಕರ್ನಾಟಕದಲ್ಲಿ ಎರಡು (ಹ್ಯೂಮನ್ ಮೆಟಾಪ್ನ್ಯೂಮೋವೈರಸ್) ಪ್ರಕರಣಗಳನ್ನು ದೃಢಪಡಿಸಿದ ಕೆಲವೇ ಗಂಟೆಗಳ ನಂತರ, ಗುಜರಾತ್‌ನಲ್ಲಿ ಮತ್ತೊಂದು ಪ್ರಕರಣ ವರದಿಯಾಗಿದೆ. ಎಬಿಪಿ ಅಸ್ಮಿತಾ ಪ್ರಕಾರ, ಗುಜರಾತ್‌ನಲ್ಲಿ ಇದು ಮೊದಲ ಎಚ್‌ಎಂಪಿವಿ ಪ್ರಕರಣವಾಗಿದೆ. ಸುಮಾರು 2 ವರ್ಷ ವಯಸ್ಸಿನ ಮಗುವಿನಲ್ಲಿ ಹೆಚ್‌ಎಂಪಿವಿ ವೈರಸ್ ಪತ್ತೆಯಾಗಿದೆ. ರೋಗಿಯನ್ನು ಅಹಮದಾಬಾದ್‌ನ ಚಂದ್‌ಖೇಡಾ ಪ್ರದೇಶದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.