ಬೆಳಗಾಯಿತು ವಾರ್ತೆ |Www.belagayithu.in
ಬಳ್ಳಾರಿ: ರೇಣುಕಾ ಸ್ವಾಮಿ ಕೊಲೆ ಆರೋಪದ ಮೇಲೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಜೈಲು ಸೇರಿದ್ದ ನಟ ದರ್ಶನ್ ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿದ ಪೋಟೋ ವೈರಲ್ ಆದ ಹಿನ್ನೆಲೆ ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವಂತೆ ಕೋರ್ಟ್ ಆದೇಶ ನೀಡಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡೋದು ನೋಡಲು ಬೆಳ್ಳಂ ಬೆಳಿಗ್ಗೆಯಿಂದ ಮಳೆ, ಬಿಸಿಲು ಲೆಕ್ಕಿಸದೆ ಸಂಜೆಯವರೆಗೆ ಕಾದು ಕಾದು ಸುಸ್ತಾದ ಅಭಿಮಾನಿಗಳು.
ನಗರದ ಕನಕ ದುರ್ಗಮ್ಮ ದೇವಸ್ಥಾನ ಹತ್ತಿರದ ಬಳ್ಳಾರಿ ಕೇಂದ್ರ ಕಾರಾಗೃಹದ ಮುಂಭಾಗದಲ್ಲಿ ಪೊಲೀಸರು ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು. ಇದೇ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾ ರಾಣಿ ಅವರು ಕಾರಾಗೃಹ ಪರಿಶೀಲನೆ ನಡೆಸಿ ಸಕಲ ಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬಳ್ಳಾರಿ, ಕೊಪ್ಪಳ, ರಾಯಚೂರು, ಚಿತ್ರದುರ್ಗದ ಜಿಲ್ಲೆಯಿಂದ ನೆಚ್ಚಿನ ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡೋದು ನೋಡಲು ಬೆಳಿಗ್ಗೆಯಿಂದಲೇ ದರ್ಶನ ಅವರನ್ನು ಜೈಲಿನ ಮುಂಭಾಗಕ್ಕೆ ಆಗಮಿಸಿದ್ದರು. ನಟ ದರ್ಶನ್ ಅವರನ್ನು ಬೆಂಗಳೂರಿಗೆ ಹೋಗಿ ನೋಡುವುದು ನಮಗೆ ಕಷ್ಟ, ಕೊಲೆ ಆರೋಪದ ಮೇಲೆ ಬಳ್ಳಾರಿಗೆ ಬರುತ್ತಿರುವುದು ದುರಂತ ಆದರೂ ಅವರನ್ನು ನೋಡಲು ಬಂದಿದ್ದೇವೆ ಎಂಬುದು ಬಹುತೇಕ ಅಭಿಮಾನಿಗಳ ಮನದಾಳದ ಮಾತುಗಳು.
ಬೆಳಿಗ್ಗೆಯಿಂದ ಸಂಜೆ ವರೆಗೆ ಜೈಲಿನ ಮುಂಭಾಗದಲ್ಲಿ ಕಾದು ನಿಂತಿದ್ದ ದರ್ಶನ್ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಬಳ್ಳಾರಿ ಜೈಲಿನಲ್ಲಿ ದುಡ್ಡು ಕೊಟ್ಟರೆ ಎಲ್ಲಾ ಸಿಗುತ್ತೆ
ದರ್ಶನ್ ಅಭಿಮಾನಿ ಜಯಸಿಂಹ ಅವರು ಮಾತನಾಡಿ ದರ್ಶನ್ ಬಳ್ಳಾರಿ ಜೈಲಿಗೆ ಬರುತ್ತಿರುವುದು ತುಂಬಾ ನೋವಾಗುತ್ತಿದೆ. ನಾನು ದರ್ಶನ ಅವರ ಅಭಿಮಾನಿ ಬಳ್ಳಾರಿ ಜೈಲು ಬಿಟ್ಟು ಬೇರೆ ಜೈಲಿಗೆ ಹಾಕಬಹುದಿತ್ತು. ಕೊಲೆ ಆರೋಪದ ಮೇಲೆ ನಾನು ಬಳ್ಳಾರಿ ಜೈಲಿನಲ್ಲಿ ಆರು ವರ್ಷಗಳ ಕಾಲ ಇದ್ದೆ, ಬಳ್ಳಾರಿ ಜೈಲಿನಲ್ಲಿ ಊಟ ಚೆನ್ನಾಗಿಲ್ಲ, ಸಾಂಬಾರ್ ಸೇರಿದಂತೆ ಏನು ಚೆನ್ನಾಗಿಲ್ಲ ಜೈಲಿನಲ್ಲಿ ಖೈದಿಗಳನ್ನು ತಾರತಮ್ಯದಿಂದ ನೋಡಲಾಗುತ್ತಿದೆ. ಅದಕ್ಕಾಗಿ ನನಗೆ ತುಂಬಾ ಬೇಜಾರುಗುತ್ತಿದೆ. ದರ್ಶನ್ ಅವರಿಗೆ ಒಳ್ಳೆಯ ಊಟ ನೀಡ್ತಾರೆ ಎಂದು ಯಾರಿಗೆ ಗೊತ್ತು, ಆರೋಪಿಗಳಿಗೆ ಮತ್ತು ಖೈದಿಗಳಿಗೆ ಬೇರೆ ಬೇರೆ ರೀತಿಯ ಊಟ ನೀಡಲಾಗುತ್ತದೆ. ದರ್ಶನ್ ಚೆನ್ನಾಗಿ ಇರಬೇಕು ಅದಕ್ಕಾಗಿ ಹೇಳುತ್ತಿದ್ದೇನೆ. ಬಾಸ್ ಎಲ್ಲೆ ಇದ್ದರೂ ಚೆನ್ನಾಗಿ ಇರಬೇಕು. ಬಳ್ಳಾರಿ ಜೈಲಿನಲ್ಲಿ ಗಾಂಜಾ ಸಿಗರೇಟು ಸೇರಿದಂತೆ ಎಲ್ಲಾ ಡಬಲ್ ರೇಟ್ ನಲ್ಲಿ ಸಿಗುತ್ತದೆ. ವಾರ್ಡನ್, ಸುಪರಿಂಟೆಂಡೆಂಟ್, ಜೈಲರ್ ಗಳು ದುಡ್ಡು ಕೊಟ್ಟರೆ ಎಲ್ಲಾವನ್ನು ತಂದು ಕೊಡುತ್ತಾರೆ. ಖೈದಿಗಳನ್ನು ನೋಡಲು ಹೋಗಲು ಸಹ ದುಡ್ಡು ಕೊಡಬೇಕು ಅಂತಹ ವ್ಯವಸ್ಥೆ ಬಳ್ಳಾರಿ ಜೈಲಿನಲ್ಲಿ ಇದೆ ಎಂದು ಆರೋಪಿಸಿದ್ದಾರೆ.





