ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಹಿಳಾ ಮೀಸಲಾತಿ ಜಾರಿಗೆ ಪ್ರಯತ್ನ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಹಾಗೂ ಅದರ ಮೈತ್ರಿ ಪಕ್ಷಗಳಾದ ಡಿಎಂಕೆ, ಸಮಾಜವಾದಿ ಪಕ್ಷ, ಟಿಎಂಸಿ ಪಕ್ಷಗಳು ಈ ಮೀಸಲಾತಿಗೆ ಅಡ್ಡಿಯಾಗಿವೆ ಎಂದು ಮಾಜಿ ಸಚಿವ ಬಿ. ಶ್ರೀ ರಾಮುಲು ಅವರು ಆರೋಪಿಸಿದರು.
ನಗರದ ನಿವಾಸದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,
ಮಹಿಳೆಯರ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಯಾವತ್ತೂ ಕೆಲಸ ಮಾಡಿಲ್ಲ, ಮಹಿಳೆಯರ ಏಳ್ಗೆಯನ್ನು ವಿರೋಧಿಸಿದೆ. ಕಾಂಗ್ರೆಸ್ ಪಕ್ಷವು ಕೇವಲ ಗಾಂಧಿ ಕುಟುಂಬಕ್ಕೆ ಸೀಮಿತವಾಗಿದೆ, ಮಹಿಳಾ ಮೀಸಲಾತಿ ಬಿಲ್ ವಿಫಲವಾದಾಗ ಕಾಂಗ್ರೆಸ್ ಸದಸ್ಯರು ಸಂತಸಪಟ್ಟರು ಎಂದು ಆರೋಪಿಸಿದರು.
ಇದೇ ವೇಳೆ, ತ್ರಿಪಲ್ ತಲಾಕ್, ಸಿಎಎ, ರಾಮ ಮಂದಿರ ಹಾಗೂ ವಿಧಿ 370 ರಂತಹ ಮಹತ್ವದ ವಿಷಯಗಳಲ್ಲಿಯೂ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ ಎಂದು ಹೇಳಿದ ಅವರು, ದೇಶದ ಅಭಿವೃದ್ಧಿ ಬಿಲ್‌ಗಳಿಗೆ ‘ಇಂಡಿ’ ಕೂಟ ವಿರೋಧಿಸುತ್ತಿದೆ ಎಂದು ಹೇಳಿದರು.
ಖರ್ಗೆ ಹೇಳಿಕೆಗೆ ಪ್ರತಿಕ್ರಿಯೆ:
ಪ್ರಧಾನಮಂತ್ರಿ ಕುರಿತು ‘ಟೆರರಿಸ್ಟ್’ ಎಂಬ ಪದ ಬಳಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು. ದೇಶದ ಪ್ರಧಾನಮಂತ್ರಿಯನ್ನು ಅವಮಾನಿಸುವುದು ಸರಿಯಲ್ಲ.
ಕುಟುಂಬ ರಾಜಕಾರಣಕ್ಕೆ ಒಲವು ತೋರಿಸುವುದು ಕಾಂಗ್ರೆಸ್‌ನ ಸ್ವಭಾವ. ದೇಶ ವಿರೋಧಿ ಚಟುವಟಿಕೆಗಳಿಗೆ ಬೆಂಬಲ ನೀಡುವವರ ಪರ ಕಾಂಗ್ರೆಸ್ ನಿಲ್ಲುತ್ತದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಹನುಮಂತಪ್ಪ ಗುಡಿಗಂಟಿ, ಗುರುಲಗನಗೌಡ, ಉಜ್ವಲ, ಭೀಮಲಿಂಗ, ವೇಮಣ್ಣ, ಕೆ. ಹನುಮಂತಪ್ಪ, ಮೋತ್ಕರ್ ಶ್ರೀನಿವಾಸ, ಸೂರಿ, ವೆಂಕಟರಮಣ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.





