ಬೆಳಗಾಯಿತು ವಾರ್ತೆ | www.belagayithu.in
ಬಳ್ಳಾರಿ: ರಾಜ್ಯ ಕಾಂಗ್ರೆಸ್ ಸರ್ಕಾರ ರೈತರಿಗೆ ಮಾಡುತ್ತಿರುವ ಅನ್ಯಾಯದ ವಿರುದ್ಧ ಭಾರತೀಯ ಜನತಾ ಪಾರ್ಟಿ ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ನಂತರ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಗಣಪಾಲ್ ಐನಾಥರೆಡ್ಡಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರ್ಣ ಮಾಡಿದೆ. ಆದರೆ ರೈತರಿಗೆ ಯಾವ ಸವಲತ್ತು ನೀಡದೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿಂದಿನ ಬಿಜೆಪಿ ಸರ್ಕಾರ ಎಫ್ ಪಿ ಓಗಳಿಗೆ 150 ಕೋಟಿ ಅನುದಾನವನ್ನು ಕಾಯ್ದಿರಿಸಲಾಗಿತ್ತು. ಹಲವಾರು ಎಫ್ ಪಿ ಓಗಳು ಒಳ್ಳೆಯ ಕಾರ್ಯ ಹಂತದಲ್ಲಿ ಇತ್ತು. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಯಾವುದೇ ಅನುದಾನ ಬಿಡುಗಡೆ ಆಗುತ್ತಿಲ್ಲ. ಎಫ್ ಪಿ ಓ ಗಳಿಂದ 10ಲಕ್ಷಕ್ಕೂ ಹೆಚ್ಚಿಗೆ ಮತ್ತು 12000 ರೈತ ಉತ್ಪಾದಕರ ಸಂಸ್ಥೆಗಳಿಗೆ ನಷ್ಟವಾಗಿದೆ. ಒಳ್ಳೆಯ ಹಂತದಲ್ಲಿ ಇರುವ ಸಂಸ್ಥೆಗಳನ್ನು ಸರ್ಕಾರವೇ ಮುಚ್ಚುವ ಹಂತಕ್ಕೆ ತಂದಿದ್ದಾರೆ ಎಂದರು.
ಬಿಜೆಪಿ ಸರ್ಕಾರ ರೈತರಿಗೆ ಕೃಷಿ ಸಮಾನ್ ಯೋಜನೆಯಲ್ಲಿ ನೀಡುತ್ತಿದ್ದ 4 ಸಾವಿರ ಹಣವನ್ನು ನಿಲ್ಲಿಸಿದೆ. ಮಕ್ಕಳಿಗೆ ನೀಡುತ್ತಿದ್ದ ವಿದ್ಯಾನಿಧಿ ಯೋಜನೆ ನಿಲ್ಲಿಸಿದೆ. 1500 ರೂಪಾಯಿಗಳ ರೈತ ಶಕ್ತಿ ಯೋಜನೆ ನಿಲ್ಲಿಸಿದೆ. ಕೃಷಿ ಭೂ ಸಿರಿ ಯೋಜನೆ ನಿಲ್ಲಿಸಿ, ಕೃಷಿಗೆ ಸಂಬಂಧಿಸಿದ ಬರ ಪರಿಹಾರ ಸರಿಯಾಗಿ ನೀಡದೇ ಬರ ಪರಿಹಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಈಗಾಗಲೇ ಸಂಕಷ್ಟದಲ್ಲಿರುವ ರೈತರು ಬರಗಾಲದಿಂದ ತತ್ತರಿಸಿ ಕುಗ್ಗಿ ಹೋಗಿದ್ದು, ಬಹಳಷ್ಟು ನಷ್ಟು ಅನುಭವಿಸುತ್ತಿದ್ದಾರೆ. ಈಗ ಏಕಾಏಕಿಯಾಗಿ ಕಾಂಗ್ರೆಸ್ ಸರ್ಕಾರ ಪ್ರತಿಯೊಂದಕ್ಕೂ ತೆರಿಗೆ ಹಾಗೂ ಇನ್ನಿತರ ಖರ್ಚುಗಳನ್ನು ಹಾಕುತ್ತಿದೆ. ಇದರಿಂದ ರೈತರಿಗೆ ಅನಾನುಕೂಲವಾಗುತ್ತಿರುವುದರಿಂದ ಕೂಡಲೇ ಈ ಸಮಸ್ಯೆಗಳನ್ನು ಪರಿಸರಿಸಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಗುರುಲಿಂಗನ ಗೌಡ, ಪುಷ್ಪ, ಸೇರಿದಂತೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದರು.





