ಬೆಳಗಾಯಿತು ವಾರ್ತೆ | www.belagayithu.in
ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಕಾಂಗ್ರೆಸ್ ಪಕ್ಷದ 18 ನೇ ವಾರ್ಡಿನ ಮುಲ್ಲಂಗಿ ನಂದೀಶ್ ಮತ್ತು ಉಪ ಮೇಯರ್ ಆಗಿ 26 ನೇ ವಾರ್ಡಿನ ಡಿ. ಸುಕುಂ ಅವರು ಆಯ್ಕೆಯಾಗಿದ್ದಾರೆ.
ನಗರದ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಶುಕ್ರವಾರ ಕಲಬುರ್ಗಿಯ ಪ್ರಾದೇಶಿಕ ಆಯುಕ್ತರಾದ ಕೃಷ್ಣ ವಾಜಪೇಯಿ ಅವರ ನೇತೃತ್ವದಲ್ಲಿ ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಹಾಗೂ ಸ್ಥಾಯಿ ಸಮಿತಿ ಚುನಾವಣೆ ನಡೆಯಿತು.
ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷದ 21 ಜನ ಪಾಲಿಕೆ ಸದಸ್ಯರು ಮತ್ತು 5 ಜನ ಪಕ್ಷೇತರ ಪಾಲಿಕೆ ಸದಸ್ಯರು ಕಾಂಗ್ರೆಸ್ ಪಕ್ಷ ಬೆಂಬಲ ಸೂಚಿಸಿದ್ದಾರೆ. ಬಿಜೆಪಿ ಪಕ್ಷದ 13 ಜನ ಪಾಲಿಕೆ ಸದಸ್ಯರಿದ್ದಾರೆ.
ಸಂಸದ ಈ.ತುಕರಾಂ,ರಾಜ್ಯಾಸಭಾ ಸದಸ್ಯರಾದ ನಾಸೀರ್ ಹುಸೇನ್, ವಿಧಾನ ಪರಿಷತ್ ಸದಸ್ಯರಾದ ವೈ.ಎಂ.ಸತೀಶ್, ಶಾಸಕ ನಾಗೇಂದ್ರ, ಶಾಸಕ ನಾರಾ ಭರತ್ ರೆಡ್ಡಿ ಅವರು ಮತದಾನ ಮಾಡಿದರು.
ಮೇಯರ್ ಸ್ಥಾನಕ್ಕೆ ಸ್ಪರ್ಧೆ ಮಾಡಿದ ಕಾಂಗ್ರೆಸ್ ಪಕ್ಷದ ಮುಲ್ಲಂಗಿ ನಂದೀಶ್ ಅವರಿಗೆ 30 ಮತಗಳು ಹಾಗೂ ಬಿಜೆಪಿ ಪಕ್ಷದಿಂದ ಮೇಯರ್ ಸ್ಥಾನಕ್ಕೆ ಸ್ಪರ್ಧೆ ಮಾಡಿದ ಶ್ರೀನಿವಾಸ್ ಮೋತ್ಕರ್ ಅವರಿಗೆ 14 ಮತಗಳು ಬಂದಿವೆ. ಉಪ ಮೇಯರ್ ಸ್ಥಾನಕ್ಕೆ ಸ್ಪರ್ಧೆ ಮಾಡಿದ ಕಾಂಗ್ರೆಸ್ ಪಕ್ಷದ ಡಿ.ಸುಕುಂ ಅವರಿಗೆ 30 ಮತಗಳು ಹಾಗೂ ಬಿಜೆಪಿ ಪಕ್ಷದಿಂದ ಉಪ ಮೇಯರ್ ಸ್ಥಾನಕ್ಕೆ ಸ್ಪರ್ಧೆ ಮಾಡಿದ ಚೇತನಾ ಅವರಿಗೆ 13 ಮತಗಳು ಬಂದಿವೆ.
ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ನಂದೀಶ್, ಪ್ರಭಂಜನ್, ಪೂಜಾರಿ ಗಾದೆಪ್ಪ, ಪೆರಂ ವಿವೇಕ್ (ವಿಕ್ಕಿ) ಅವರು ನಾಮಪತ್ರ ಸಲ್ಲಿಸಿದ್ದರು.
ಮಹಾನಗರ ಪಾಲಿಕೆಯ ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.





