ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ಬಳ್ಳಾರಿ ನಗರದ ಎಪಿಎಂಸಿ ಪೊಲೀಸ್ ಠಾಣೆಯ ವಶದಿಂದ ತಪ್ಪಿಸಿಕೊಂಡಿದ್ದ ಪ್ರಮುಖ ಆರೋಪಿ ಸಂತೋಷ್ ಕುಮಾರ್ ಅವರನ್ನು ಪೊಲೀಸರು ಮತ್ತೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಪಿಎಂಸಿ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 65/2026 ಪ್ರಕರಣದಲ್ಲಿ ಸಂತೋಷ್ ಕುಮಾರ್ ಎಂಬ ಆರೋಪಿಯನ್ನು ಏಪ್ರಿಲ್ 15ರಂದು ಬಂಧಿಸಿ ವಿಚಾರಣೆ ನಡೆಸಲಾಗುತ್ತಿತ್ತು. ಆದರೆ ಏಪ್ರಿಲ್ 16ರಂದು ಮಧ್ಯಾಹ್ನ 2.30ರಿಂದ 3.10ರ ಅವಧಿಯಲ್ಲಿ ಆರೋಪಿ ಪೊಲೀಸ್ ವಶದಿಂದ ಪರಾರಿಯಾಗಿದ್ದನು. ಈ ಕುರಿತು ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿತ್ತು.
ಆರೋಪಿಯ ಪತ್ತೆಗಾಗಿ ಡಿ.ಎಸ್.ಪಿ ವಿ. ಗೋವಿಂದರಾಜು ಅವರ ನೇತೃತ್ವದಲ್ಲಿ ಐದು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಬಳ್ಳಾರಿ ನಗರ ಹಾಗೂ ಗ್ರಾಮೀಣ ಉಪವಿಭಾಗದ ಪೊಲೀಸ್ ಸಿಬ್ಬಂದಿ ಸಮನ್ವಯದಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು.
ತಂತ್ರಜ್ಞಾನದ ಸಹಾಯದಿಂದ ಕೇವಲ 24 ಗಂಟೆಗಳ ಒಳಗಾಗಿ, ಏಪ್ರಿಲ್ 17ರಂದು ಆರೋಪಿಯನ್ನು ಪತ್ತೆಹಚ್ಚಿ ಮತ್ತೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪರಾರಿಯಾದ ನಂತರ ಆರೋಪಿಗೆ ಸಹಾಯ ಮಾಡಿದವರ ಕುರಿತೂ ತನಿಖೆ ನಡೆಯುತ್ತಿದೆ. ಮೊಬೈಲ್, ಹಣ, ವಾಹನ ಹಾಗೂ ಆಶ್ರಯ ಒದಗಿಸಿದ ಹಲವು ವ್ಯಕ್ತಿಗಳನ್ನು ಗುರುತಿಸಲಾಗಿದ್ದು, ಅವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಸಿದೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನೈಕರ್ ಅವರು ಮಾಹಿತಿ ನೀಡಿದ್ದು, ಆರೋಪಿಗೆ ಸಹಾಯ ಮಾಡುವುದು ಕೂಡ ಕಾನೂನುಬಾಹಿರ ಎಂದು ತಿಳಿಸಿದ್ದಾರೆ.





