ಬೆಳಗಾಯಿತು ವಾರ್ತೆ | Www.belagayithu.in
ಬೆಂಗಳೂರು: ರಾಜ್ಯ ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಬಿ.ಝೆಡ್. ಜಮೀರ್ ಅಹ್ಮದ್ ಖಾನ್ ಸೋಮವಾರ ವಿಧಾನಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ 17,969 ಎಕರೆ ವಕ್ಫ್ ಆಸ್ತಿಯನ್ನು ಅತಿಕ್ರಮಣ ಮಾಡಲಾಗಿದೆ, ಈ ಪೈಕಿ ಹೆಚ್ಚಿನವರು ಮುಸ್ಲಿಮರೇ ಆಗಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಅಫ್ಜಲ್‌ಪುರ ಕಾಂಗ್ರೆಸ್ ಶಾಸಕ ಎಂ.ವೈ. ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, “ರಾಜ್ಯಾದ್ಯಂತ ಒಟ್ಟು 1,12,860 ಎಕರೆಗಳಷ್ಟು ವಕ್ಫ್ ಆಸ್ತಿ ಇದ್ದು, ಅದರಲ್ಲಿ ಕೇವಲ 20,054 ಎಕರೆಗಳು ನಮ್ಮ ಕೈಯಲ್ಲಿವೆ. 17,969 ಎಕರೆಗಳನ್ನು ಅತಿಕ್ರಮಣ ಮಾಡಲಾಗಿದೆ, 47,263 ಎಕರೆಗಳನ್ನು ಇನಾಂ ರದ್ದತಿ ಕಾಯ್ದೆಯಡಿ ಮತ್ತು 23,627 ಎಕರೆಗಳನ್ನು ಭೂ ಸುಧಾರಣಾ ಕಾಯ್ದೆಯಡಿ ಒತ್ತುವರಿ ಮಾಡಲಾಗಿದೆ” ಎಂದು ಖಾನ್ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ತಾವು ಇಲಾಖೆಯ ಸಚಿವರಾದ ನಂತರ, ಅತಿಕ್ರಮಣಗಳನ್ನು ತೆಗೆದುಹಾಕುವ ಉದ್ದೇಶದಿಂದ ರಾಜ್ಯಾದ್ಯಂತ ವಕ್ಫ್ ಅದಾಲತ್‌ಗಳನ್ನು ನಡೆಸಲಾಗಿದೆ ಎಂದು ಅವರು ಹೇಳಿದರು.





