ಬೆಳಗಾಯಿತು ವಾರ್ತೆ
ಬಳ್ಳಾರಿ: ದೇಶದಲ್ಲಿ ಸುಮಾರು 1500ಕ್ಕೂ ಹೆಚ್ಚು ಮಾನವ ಹಕ್ಕುಗಳ ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ ದಕ್ಷಿಣ ಏಷ್ಯಾ ಮಾನವ ಹಕ್ಕುಗಳ ವೇದಿಕೆ ಜನಸಾಮಾನ್ಯರ ವಿವಿಧ ಸಮಸ್ಯೆಗಳಿಗೆ ಸ್ಪಂದಿಸುವ ಜನಪರ ಸಂಘಟನೆಯಾಗಿದೆ ಎಂದು ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ಎಸ್. ಬಾಬು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವೇದಿಕೆ ಭಾರತ ಸರ್ಕಾರದ ಗ್ರಾಹಕರ ಸಚಿವಾಲಯದಲ್ಲಿ ಅಧಿಕೃತವಾಗಿ ನೋಂದಾಯಿತವಾಗಿದ್ದು, ಸುಮಾರು 80 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಬೃಹತ್ ಸಂಘಟನೆಯಾಗಿದೆ. ಸಂಘಟನೆಯ ಮೂಲ ಉದ್ದೇಶ ಸಮಾಜದಲ್ಲಿ ಬಲಹೀನರು ಹಾಗೂ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸುವುದಾಗಿದೆ ಎಂದ ಅವರು, ಪೊಲೀಸ್ ಠಾಣೆಗಳಲ್ಲಿ ಅಥವಾ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಪಂಚಾಯಿತಿ ಮಾಡುವ ಸಂಘಟನೆಯಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದರು.
ವೇದಿಕೆಯ ಹೆಸರನ್ನು ದುರ್ಬಳಕೆ ಮಾಡುವ ಯಾವುದೇ ಸದಸ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಗೂಗಲ್ ಮೂಲಕ ದೂರು ಸಲ್ಲಿಸಿದಲ್ಲಿ ಆ ಸದಸ್ಯರನ್ನು ತಕ್ಷಣವೇ ಸಂಘಟನೆಯಿಂದ ವಜಾಗೊಳಿಸಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ವೇದಿಕೆಯ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಲಾಯಿತು. ರಾಜ್ಯ ಯುವಘಟಕದ ಅಧ್ಯಕ್ಷರಾಗಿ ಎನ್. ವಲಿ ಪೀರ್, ರಾಜ್ಯ ಉಪಾಧ್ಯಕ್ಷರಾಗಿ ಸುಂಕಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ನಾಗಪ್ಪ, ಜಿಲ್ಲಾ ಅಧ್ಯಕ್ಷರಾಗಿ ದೂದ್ ಭಾಷಾ, ಜಿಲ್ಲಾ ಉಪಾಧ್ಯಕ್ಷರಾಗಿ ಜಮಾಲುದ್ದೀನ್ ಹಾಗೂ ಹುಸೇನಪ್ಪ ಅವರನ್ನು ನೇಮಕ ಮಾಡಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ದೆಹಲಿ ಪ್ರತಿನಿಧಿ ನವೀನ್, ನವಾಜ್, ಮೆಹಬೂಬ್, ಅಮೀನಾ, ಸುಜಾತ, ಪದ್ಮಾವತಿ, ಹುಲಿಗೆಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ದಕ್ಷಿಣ ಏಷ್ಯಾ ಮಾನವ ಹಕ್ಕುಗಳ ವೇದಿಕೆಯ ರಾಜ್ಯಾಧ್ಯಕ್ಷರಾಗಿ ವಲಿ ಪೀರ್ ನೇಮಕ





