ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ನಗರದ ಕೇಂದ್ರ ಬಸ್ ನಿಲ್ದಾಣದ ಬೈಕ್ ಪಾರ್ಕಿಂಗ್ ಪ್ರದೇಶದಲ್ಲಿ ಬೃಹತ್ ಮರ ಉರುಳಿ ಬಿದ್ದ ಪರಿಣಾಮ 20ಕ್ಕೂ ಹೆಚ್ಚು ಬೈಕ್‌ಗಳು ಜಖಂಗೊಂಡ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಮಂಗಳವಾರ ರಾತ್ರಿ ಬೀಸಿದ ಭಾರಿ ಬಿರುಗಾಳಿಯ ಪರಿಣಾಮವಾಗಿ ಪಾರ್ಕಿಂಗ್ ಪ್ರದೇಶದಲ್ಲಿದ್ದ ದೊಡ್ಡ ಮರ ಧರೆಗುರುಳಿದೆ. ಕಳೆದ ಒಂದು ವಾರದಿಂದ ತೀವ್ರ ಬಿಸಿಲು ಕಾಣಿಸಿಕೊಂಡಿದ್ದ ಹಿನ್ನಲೆಯಲ್ಲಿ ಹವಾಮಾನದಲ್ಲಿ ಏಕಾಏಕಿ ಬದಲಾವಣೆ ಕಂಡುಬಂದಿದ್ದು, ಗಾಳಿ-ಮಳೆಯೊಂದಿಗೆ ಮರ ಉರುಳಿ ಬಿದ್ದಿದೆ.
ಮರ ಬಿದ್ದ ಪರಿಣಾಮ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ 20ಕ್ಕೂ ಹೆಚ್ಚು ಬೈಕ್‌ಗಳು ಹಾನಿಗೊಳಗಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಘಟನೆಯ ಬಳಿಕ ಬೆಳಿಗ್ಗೆ ಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮರ ತೆರವು ಕಾರ್ಯ ಕೈಗೊಂಡರು.
ಇನ್ನೂ, ಹಲವಾರು ಬೈಕ್‌ಗಳಿಗೆ ಇನ್ಷುರನ್ಸ್ ಇಲ್ಲದಿರುವುದರಿಂದ ವಾಹನ ಸವಾರರಲ್ಲಿ ಆತಂಕ ಹೆಚ್ಚಾಗಿದೆ. ವಾಹನಗಳ ದುರಸ್ತಿ ವೆಚ್ಚವನ್ನು ಯಾರು ಭರಿಸಬೇಕು ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ.
ಈ ಕುರಿತು KSRTC ಅಧಿಕಾರಿಗಳು ಹಾಗೂ ಪಾರ್ಕಿಂಗ್ ಗುತ್ತಿಗೆದಾರರ ನಡುವೆ ಜವಾಬ್ದಾರಿ ಕುರಿತು ಚರ್ಚೆ ನಡೆಯುತ್ತಿದೆ.
ಪಾರ್ಕಿಂಗ್ ನಿರ್ವಹಕರು “ಪಾರ್ಕಿಂಗ್‌ನಲ್ಲಿ ವಾಹನಗಳ ಸುರಕ್ಷತೆ ನಮ್ಮ ಜವಾಬ್ದಾರಿ, ಆದರೆ ಪ್ರಕೃತಿ ವಿಕೋಪದಿಂದ ಉಂಟಾದ ನಷ್ಟವನ್ನು ನಾವು ಭರಿಸಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನೊಂದೆಡೆ, ವಾಹನ ಸವಾರರು “ಪಾರ್ಕಿಂಗ್ ಶುಲ್ಕ ಪಡೆಯುವವರು ನಷ್ಟವನ್ನು ಭರಿಸಬೇಕು” ಎಂದು ಒತ್ತಾಯ ವ್ಯಕ್ತಪಡಿಸಿದ್ದಾರೆ.




