ಬೆಳಗಾಯಿತು ವಾರ್ತೆ| www.belagayithu.in
ಹರಪನಹಳ್ಳಿ: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಕಾರ್ಯಕಾರಿ ಸಮಿತಿ ಚುನಾವಣೆ ಶುಕ್ರವಾರ ನಗರದಲ್ಲಿ ಬಿರುಸಿನಿಂದ ನಡೆಯಿತು.
ನಗರದ ಸರ್ಕಾರಿ ಮಾದರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲಿ ನಡೆದ ಚುನಾವಣೆಯಲ್ಲಿ ಒಟ್ಟು ಮೂರು ಮತಗಟ್ಟೆಗಳನ್ನು ತೆರೆಯಲಾಗಿತ್ತು, ಬೆಳಗ್ಗೆ ೮.೩೦ಕ್ಕೆ ಆರಂಭವಾದ ಮತದಾನ ಸಂಜೆ ೪.೩೦ ವರೆಗೆ ನಡೆಯಿತು, ಸರತಿ ಸಾಲಿನಲ್ಲಿ ಬಂದು ಶಿಕ್ಷಕರು ಮತ ಚಲಾಯಿಸಿದರು, ಒಟ್ಟು ೧೦೭೮ ಮತದಾರರ ಪೈಕಿ ೭೪೧ ಮತದಾರರು ತಮ್ಮ ಹಕ್ಕು ಚಲಾಯಿಸಿದರು.
ಒಟ್ಟು ೨೨ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ೪೪ ಅಭ್ಯರ್ಥಿಗಳು ಕಣದಲ್ಲಿದ್ದರು, ಇದರಲ್ಲಿ ಪ್ರಗತಿಪರ ಶಿಕ್ಷಕರ ವೇದಿಕೆಯಿಂದ ೨೨ ಅಭ್ಯರ್ಥಿಗಳು ಮತ್ತು ಗುರು ಬಳಗ ವಿಚಾರ ವೇದಿಕೆಯಿಂದ ೨೨ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು.
ಚುನಾವಣೆ ಆರಂಭಕ್ಕೂ ಮುನ್ನ ಗುರು ಬಳಗದವರು ಶಿಕ್ಷಕ ಸಂಘದ ಚುನಾವಣೆಗೆ ನ್ಯಾಯಾಲಯ ತಡೆ ನೀಡಿದೆ ಎನ್ನಲಾದ ಆದೇಶ ಪ್ರತಿಯನ್ನ ಚುನಾವಣಾಧಿಕಾರಿಗೆ ನೀಡಿದಾಗ ಆಗ ಚುನಾವಣಾಧಿಕಾರಿ ನಮಗೆ ನ್ಯಾಯಾಲಯದಿಂದ ಯಾವುದೇ ಅಧಿಕೃತ ಆದೇಶ ಬಂದಿಲ್ಲ, ಮತ್ತು ಈ ಆದೇಶ ಪ್ರತಿಯಲ್ಲಿ ನ್ಯಾಯಾದೀಶರ ಸಹಿ ಇಲ್ಲ ಎಂದು ಚುನಾವಣಾ ಪ್ರಕ್ರಿಯೆ ಆರಂಭಿಸಿದರು.
ಡಿವೈಎಸ್ಪಿ ಸಂತೋಷ ಚವ್ಹಾಣ್ ಮಾರ್ಗದರ್ಶನದಲ್ಲಿ ಸಿಪಿಐ ಮಹಾಂತೇಶ ಸಜ್ಜನ್, ಪಿಎಸ್‌ಐ ಶಂಭುಲಿಂಗ ಸಿ.ಹಿರೇಮಠ್ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.





