ಎಸ್.ಕೆ.ಆರ್. ಜಿಲಾನಿ ಬಾಷಾ ಅವರಿಗೆ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪ್ರದಾನ

ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ಹೆಜ್ಜೆಯ ನಾದಕ್ಕೆ ಗೆಜ್ಜೆಯ ನಿನಾದ ಬೆರೆತು ಅಭಿವ್ಯಕ್ತಿ, ಆಲಾಪ ಮತ್ತು ಆರಾಧನೆಯ ತ್ರಿವೇಣಿ ಸಂಗಮವಾಗಿ ಅರಳುವ ನೃತ್ಯಕಲೆಗೆ ಜೀವ ಅರ್ಪಿಸಿದ ಗಣಿನಾಡಿನ ವಿಶಿಷ್ಟ ಪ್ರತಿಭೆ ವಿದ್ವಾನ್ ಎಸ್.ಕೆ.ಆರ್. ಜಿಲಾನಿ ಬಾಷಾ ಅವರಿಗೆ 2025ನೇ ಸಾಲಿನ ಪ್ರತಿಷ್ಠಿತ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಲಭಿಸಿದೆ.

1965ರ ಮೇ 26ರಂದು ಬಳ್ಳಾರಿಯಲ್ಲಿ ಎಸ್.ಕೆ. ಫಕೃದ್ದೀನ್ ಹಾಗೂ ಎಸ್.ಕೆ. ಅಮಿರುನ್ನಿಸಾ ಬೇಗಂ ದಂಪತಿಗಳ ಪುತ್ರರಾಗಿ ಜನಿಸಿದ ಜಿಲಾನಿ ಬಾಷಾ ಅವರು ಬಾಲ್ಯದಲ್ಲೇ ನೃತ್ಯದತ್ತ ಆಕರ್ಷಿತರಾದರು. ಹತ್ತನೇ ವಯಸ್ಸಿನಲ್ಲಿಯೇ ನೃತ್ಯ ಕಲಿಯಬೇಕೆಂಬ ತೀವ್ರ ಆಸೆಯಿಂದ ಔಪಚಾರಿಕ ವಿದ್ಯಾಭ್ಯಾಸದ ಜತೆಗೆ ನೃತ್ಯಾಭ್ಯಾಸ ಆರಂಭಿಸಿದರು. ಪದ್ಮಭೂಷಣ ಡಾ. ವೆಂಪಟಿ ಚಿನ್ನ ಹಾಗೂ ನೃತ್ಯ ಭೂಷಣ ಡಾ. ಕೃಷ್ಣಮೂರ್ತಿ ರಾಜು ಅವರಿಂದ ಭರತನಾಟ್ಯ, ಕೂಚಿಪುಡಿ ಹಾಗೂ ಜಾನಪದ ನೃತ್ಯಗಳಲ್ಲಿ ತರಬೇತಿ ಪಡೆದರು.

ಎಸ್ಎಸ್ಎಲ್ಸಿವರೆಗೆ ವಿದ್ಯಾಭ್ಯಾಸ ಮಾಡಿದ ಅವರು 1996ರಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ಭರತನಾಟ್ಯ ಸೀನಿಯರ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರು. 1981ರಲ್ಲಿ ಬಳ್ಳಾರಿಯಲ್ಲಿ “ಶ್ರೀ ಲಕ್ಷ್ಮಿ ಕಲಾಕ್ಷೇತ್ರ” ನೃತ್ಯಶಾಲೆಯನ್ನು ಸ್ಥಾಪಿಸಿ ಅನೇಕ ಮಕ್ಕಳಿಗೆ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಬಂದ ನೃತ್ಯಾಭಿಲಾಷಿಗಳಿಗೆ ತರಬೇತಿ ನೀಡಿದರು.

ಕಲೆಯನ್ನೇ ಜೀವನವನ್ನಾಗಿ ಮಾಡಿಕೊಂಡ ಜಿಲಾನಿ ಬಾಷಾ ಅವರು ನೃತ್ಯಗುರು, ನೃತ್ಯಪಟು ಹಾಗೂ ಸಂಘಟಕರಾಗಿ ಹೆಸರು ಮಾಡಿದ್ದು, ಕಾಲೇಜುಗಳ ವಾರ್ಷಿಕೋತ್ಸವಗಳು, ವಿಶೇಷ ಕಾರ್ಯಕ್ರಮಗಳು ಹಾಗೂ ರಂಗಪ್ರಯೋಗಗಳಿಗೆ ನೃತ್ಯ ನಿರ್ದೇಶನ ನೀಡಿದರು. “ಕಲ್ಯಾಣಕ್ರಾಂತಿ” ಸೇರಿದಂತೆ ಹಲವಾರು ನಾಟಕಗಳಿಗೆ ನೃತ್ಯ ಸಂಯೋಜನೆ ನೀಡಿ ಜನಮನ್ನಣೆ ಗಳಿಸಿದರು. “ಅರಳಿದ ಹೂವು”, “ಪಾದದೂಳಿ”, “ಮೋಹಿನಿ ಭಸ್ಮಾಸುರ”, “ಶ್ರೀನಿವಾಸ ಕಲ್ಯಾಣ”, “ಶ್ರೀ ಕೃಷ್ಣ ಲೀಲಾ” ಮುಂತಾದ ನೃತ್ಯ ರೂಪಕಗಳು ವಿಶೇಷವಾಗಿ ಜನಪ್ರಿಯವಾಗಿವೆ.

ನಾಡಿನ ವಿವಿಧ ಸಾಂಸ್ಕೃತಿಕ ಉತ್ಸವಗಳು, ಹಂಪಿ ಉತ್ಸವ ಸೇರಿದಂತೆ ರಾಜ್ಯ ಹಾಗೂ ಅಂತಾರಾಜ್ಯ ಮಟ್ಟದ ವೇದಿಕೆಗಳಲ್ಲಿ ತಮ್ಮ ಕಲಾಪ್ರದರ್ಶನ ನೀಡಿದ ಅವರು ಅಪಾರ ಮೆಚ್ಚುಗೆ ಪಡೆದಿದ್ದಾರೆ. 25 ವರ್ಷಗಳಿಗೂ ಹೆಚ್ಚು ಕಾಲ “ಶ್ರೀ ಲಕ್ಷ್ಮಿ ಕಲಾಕ್ಷೇತ್ರ” ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿ ನೂರಾರು ನೃತ್ಯಪಟುಗಳನ್ನು ಕಲಾಲೋಕಕ್ಕೆ ಪರಿಚಯಿಸಿದ ಸಾಧನೆ ಮಾಡಿದ್ದಾರೆ.

ಮೂರು ದಶಕಗಳಿಗೂ ಮೀರಿದ ಅವರ ಕಲಾಸೇವೆಯನ್ನು ಗೌರವಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 2025ನೇ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.




Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles